ಕರ್ನಾಟಕಕ್ಕೆ ರೈಲ್ವೆ ಬಜೆಟ್ ನಲ್ಲಿ ಈ ಬಾರಿ 7000 ಕೋಟಿಗೂ ಅಧಿಕ ಮೊತ್ತ ಮೀಸಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಿಂದಲೇ ಮೂರು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, ಈ ವರ್ಷದ ಬಜೆಟ್ ನಲ್ಲಿ ಕರ್ನಾಟಕಕ್ಕೆ 7000 ಕೋಟಿಗೂ ಅಧಿಕ ಮೊತ್ತ ಮೀಸಡಲಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಿಂತ 9 ಪಟ್ಟು ಹೆಚ್ಚಿನ ಮೊತ್ತವಾಗಿದೆ ಎಂದರು.
ಕರ್ನಾಟಕಕ್ಕೆ 8 ವಂದೇ ಭಾರತ್ ರೈಲುಗಳು ಸಂಪರ್ಕಿಸುತ್ತಿವೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ತಮಿಳುನಾಡಿಗೆ ರೈಲು ಬಜೆಟ್ಗೆ 6,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. 2014ಕ್ಕೆ ಹೋಲಿಸಿದರೆ 7 ಪಟ್ಟು ಹೆಚ್ಚಾಗಿದೆ. ಈಗ ನೂತನ ವಂದೇ ಭಾರತ್ ರೈಲಿನಿಂದಾಗಿ ತಮಿಳುನಾಡಿನಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 8ಕ್ಕೆ ಏರಲಿದೆ ಎಂದು ಅವರು ಹೇಳಿದರು.
ಸೆಮಿ ಹೈಸ್ಪೀಡ್ ರೈಲುಗಳ ಅನುಷ್ಠಾನದಿಂದ ಜನರಲ್ಲಿ ತಮ್ಮ ವ್ಯಾಪಾರ, ಉದ್ಯೋಗ ಮತ್ತು ಅವರ ಕನಸುಗಳನ್ನು ವಿಸ್ತರಿಸಲು ವಿಶ್ವಾಸವನ್ನು ತುಂಬಿದೆ. ದೇಶಾದ್ಯಂತ 102 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ 3 ಕೋಟಿಗೂ ಹೆಚ್ಚು ಜನರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮೋದಿ ವಿವರಿಸಿದರು.