ಕೇಂದ್ರದ ಒಡೆತನದಲ್ಲಿರುವ ಸಿಬಿಐ, ಇಡಿ ಮತ್ತು ಐಟಿಗಳು ಕಳೆದ 10 ವರ್ಷಗಳಲ್ಲಿ 5297 ಪ್ರಕರಣಗಳಲ್ಲಿ ದಾಳಿ ನಡೆಸಿದ್ದು, 40 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಅಂದರೆ ಶೇ.1ರಷ್ಟು ಪ್ರಕರಣಗಳಲ್ಲಿ ಕೂಡ ಆರೋಪ ಸಾಬಿತಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಯತ್ನಿಸುತ್ತಿವೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.
2014ರಿಂದ 2024ರ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ದುರುಪಯೋಗಪಡಿಸಿಕೊಂಡಿದೆ. ಇದುವರೆಗೆ ಪ್ರತಿಪಕ್ಷಗಳ ಮುಖಂಡರನ್ನು ಹತ್ತಿಕ್ಕಲು 5297 ದಾಳಿಗಳು ನಡೆದಿದ್ದು, 40 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಅಂದರೆ ಶೇ.1ರಷ್ಟು ಕಡಿಮೆ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಈ ಅಂಕಿ ಅಂಶಗಳನ್ನು ನಾವು ನೀಡುತ್ತಿಲ್ಲ. ಬದಲಾಗಿ ಕೇಂದ್ರ ಗೃಹ ಸಚಿವರೇ ಆಗಸ್ಟ್ 24, 2024ರಂದು ಲೋಕಸಭೆಯಲ್ಲಿ ನೀಡಿದ ಅಧಿಕೃತ ಮಾಹಿತಿ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಟಿಜೆ ಅಬ್ರಾಹಂ ಅವರೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ವಿರುದ್ಧ ಕೇವಲೇ ಗಂಟೆಗಳಲ್ಲಿ ಕ್ರಮಕೈಗೊಂಡ ರಾಜ್ಯಪಾಲರು 4-5 ವರ್ಷಗಳ ಹಿಂದಿನ ವಿಜಯೇಂದ್ರ ಪ್ರಕರಣಕ್ಕೆ ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.
ವಿಜಯೇಂದ್ರ ಸ್ವತಃ ಚುನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಶಶಿಧರ ಮಾರಣಿ ಸೇರಿದಂತೆ ಯಡಿಯೂರಪ್ಪ ಕುಟುಂಬದ ಹಲವರ ವಿರುದ್ಧ ಪ್ರಕರಣ ಇದೆ. ಹೀಗಿದ್ದಾಗ ಅವರ ವಿರುದ್ಧ ಯಾಕೆ ಇನ್ನೂ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಮತ್ತು ಸಿಬಿಐ ದಾಳಿ ಮಾಡಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.