ಜಾನಿ ಬೇರ್ ಸ್ಟೋ ಅಜೇಯ ಶತಕ ಹಾಗೂ ಶಶಾಂಕ್ ಸಿಂಗ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡ ಟಿ-20 ಕ್ರಿಕೆಟ್ ಪಂದ್ಯದಲ್ಲಿ 261 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 261 ರನ್ ಪೇರಿಸಿತು. ಪಂಜಾಬ್ ಕಿಂಗ್ಸ್ 8 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಪಂಜಾಬ್ ಕಿಂಗ್ಸ್ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತ ಚೇಸ್ ಮಾಡಿದ ವಿಶ್ವದಾಖಲೆ ಬರೆಯಿತು. 2003ರಲ್ಲಿ ದಕ್ಷಿಣ ಆಫ್ರಿಕಾ ತಂಡ 259 ರನ್ ಚೇಸ್ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೇ ವೇಳೆ ಐಪಿಎಲ್ ನಲ್ಲಿ ಒಂದೇ ಪಂದ್ಯದಲ್ಲಿ 40ಕ್ಕೂ ಹೆಚ್ಚು ಸಿಕ್ಸರ್ ಬಂದಿದ್ದು ಕೂಡ ದಾಖಲೆಯಾಗಿದೆ.
ಅಸಾಧ್ಯ ಗುರಿ ಬೆಂಬತ್ತಿದ ಪಂಜಾಬ್ ಕಿಂಗ್ಸ್ ಪರ ಜಾನಿ ಬೇರ್ ಸ್ಟೊ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 9 ಸಿಕ್ಸರ್ ಸೇರಿದ 108 ರನ್ ಬಾರಿಸಿ ಅಜೇಯರಾಗಿ ಉಳಿದರು. ಪ್ರಭ್ ಸಿಮ್ರನ್ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 54 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 6 ಓವರ್ ಗಳಲ್ಲಿ 93 ರನ್ ಗಳ ಮಿಂಚಿನ ಆರಂಭ ನೀಡಿದರು.
ರೀಲಿ ರಾಸ್ಕೊ (26) ರನ್ ಬಾರಿಸಿದರೆ ಶಶಾಂಕ್ ಸಿಂಗ್ 28 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ ಅಜೇಯ 67 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ತಂಡ ಸುನೀಲ್ ನರೇನ್ (71 ರನ್, 32 ಎಸೆತ, 9 ಬೌಂಡರಿ, 4 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (75 ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಮೊದಲ ವಿಕೆಟ್ ಗೆ 10.3 ಓವರ್ ಗಳಲ್ಲಿ 138 ರನ್ ಜೊತೆಯಾಟದಿಂದ ತಂಡ ಬೃಹತ್ ಮೊತ್ತ ದಾಖಲಿಸಿಲು ನೆರವಾದರು.