ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಗೆ ಮಳೆರಾಯ ತಣ್ಣೀರು ಹಾಕುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ನ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಉದ್ಘಾಟನಾ ಪಂದ್ಯದಲ್ಲಿ ಎದುರಾಗಿದ್ದ ಎರಡೂ ತಂಡಗಳು ಲೀಗ್ ನ ಕೊನೆಯ ಪಂದ್ಯದಲ್ಲಿ ಎದುರಾಗುತ್ತಿವೆ. ವಿಶೇಷ ಅಂದರೆ ಎರಡೂ ತಂಡಗಳು ಪ್ಲೇಆಫ್ ಗೆ ಇನ್ನೂ ಅಧಿಕೃತ ಪ್ರವೇಶ ಪಡೆದಿಲ್ಲ. ಈ ಪಂದ್ಯದಲ್ಲಿ ಗೆದ್ದ ತಂಡ ಪ್ಲೇಆಫ್ ಪ್ರವೇಶಿಸಲಿದ್ದು, ಆರ್ ಸಿಬಿ ಗೆಲುವಿನ ಜೊತೆಗೆ ಉತ್ತಮ ರನ್ ಸರಾಸರಿ ಪಡೆದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಕಠಿಣ ಪರಿಸ್ಥಿತಿಯಲ್ಲಿದೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಮೇ 18ರಂದು ಮಳೆಯಾಗಲಿದ್ದು, ಆರ್ ಸಿಬಿ ಮತ್ತು ಸಿಎಸ್ ಕೆ ಪಂದ್ಯ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಆರ್ ಸಿಬಿ ಪ್ಲೇಆಫ್ ರೇಸ್ ನಿಂದ ಹೊರಬೀಳಲಿದೆ.