ಈಶಾನ್ಯ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ 1901ರ ನಂತರದ ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ದೇಶದಲ್ಲಿ ಈ ಬಾರಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈಶಾನ್ಯ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ ಸರಾಸರಿ 31.73 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದರೆ ಈ ಬಾರಿ 38.02 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 1.96 ಡಿಗ್ರಿ ಹೆಚ್ಚು ದಾಖಲಾಗಿತ್ತು. 25.44 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದ್ದು, ಸಾಧಾರಣಕ್ಕಿಂತ 1.36 ಡಿಗ್ರಿ ಹೆಚ್ಚಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ದೇಶಾದ್ಯಂತ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಕಳೆದ 5 ವರ್ಷದಲ್ಲೇ ಕನಿಷ್ಠ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ದೇಶದಲ್ಲಿ 168 ಮಿ.ಮೀ. ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ 147.2ರಷ್ಟು ಮಿ.ಮೀ. ಮಳೆಯಾಗಿದೆ. 2001ರ ನಂತರ ಅತ್ಯಂತ ಕನಿಷ್ಠ ಮಳೆ ದಾಖಲಾಗಿರುವುದು 7ನೇ ಬಾರಿಯಾಗಿದೆ. ಕಳೆದ 5 ವರ್ಷಗಳಲ್ಲಿ ಕನಿಷ್ಠ ಮಳೆ ದಾಖಲಾಗಿದೆ. ಈ ಬಾರಿಯ ಜೂನ್ ನಲ್ಲಿ 87 ಸೆ.ಮೀ. ಮಳೆಯಾಗಿದ್ದು, ಶೇ.15ರಷ್ಟು ಕಡಿಮೆ ಆಗಿದೆ.
ಈಶಾನ್ಯ ರಾಜ್ಯಗಳಲ್ಲಿ ಶೇ.33ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಬಾರಿ ನಿರೀಕ್ಷಿತವಾಗಿ ಕೇರಳ ಗಡಿಯನ್ನು ಪ್ರವೇಶಿಸಿತ್ತು. ಆದರೆ ನಂತರ ದುರ್ಬಲಗೊಂಡಿದ್ದರಿಂದ ಉತ್ತರ ಭಾರತ, ಈಶಾನ್ಯ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.