ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್ ಪ್ಲೇಆಫ್ ನ ಎಲಿಮಿನೇಟರ್ -1 ಸುತ್ತಿನಲ್ಲಿ ಮುಖಾಮುಖಿ ಆಗಲಿವೆ.
ಗುವಾಹತಿಯಲ್ಲಿ ಭಾನುವಾರ ನಡೆಯಬೇಕಿದ್ದ ಅಗ್ರಸ್ಥಾನಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಮಳೆಯಿಂದ ರದ್ದಾಯಿತು. ಈ ಹಿನ್ನೆಲೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ರಾಜಸ್ಥಾನ್ ತಂಡವನ್ನು ಆರ್ ಸಿಬಿ ಎದುರಿಸಲಿದೆ.
ಇದಕ್ಕೂ ಮುನ್ನ ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ ಗಳಿಂದ ಗೆದ್ದು ಕ್ವಾಲಿಫೈಯರ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಸಂಪಾದಿಸಿತು. ಸನ್ ರೈಸರ್ಸ್ ಹೈದರಾಬಾದ್ 19.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ 14 ಪಂದ್ಯಗಳಲ್ಲಿ 8 ಜಯ, 5 ಸೋಲು ಹಾಗೂ ಒಂದು ಪಂದ್ಯ ರದ್ದಾಗಿದ್ದರಿಂದ 17 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೆ ಜಿಗಿಯಿತು. 20 ಅಂಕದೊಂದಿಗೆ ಅಗ್ರಸ್ಥಾನ ಪಡೆದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎಲಿಮಿನೇಟರ್ ಸುತ್ತಿನಲ್ಲಿ ಹೈದರಾಬಾದ್ ತಂಡ ಎದುರಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳಿಂದ ರೋಚಕ ಜಯ ಸಾಧಿಸಿ 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿರುವ ಆರ್ ಸಿಬಿ ತಂಡ ಮೂರನೇ ಸ್ಥಾನಕ್ಕೆ ಕುಸಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.