ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ ಗಳಿಂದ ಜಯಭೇರಿ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6 ಗೆಲುವಿನೊಂದಿಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಲಗ್ಗೆ ಹಾಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯದ ಕೊನೆಯ ಓವರ್ ನಲ್ಲಿ ಚೆನ್ನೈ ಗೆಲ್ಲಲು 35 ರನ್ ಹಾಗೂ ಪ್ಲೇಆಫ್ ಪ್ರವೇಶಿಸಲು 17 ರನ್ ಬೇಕಿತ್ತು. ಮತ್ತೊಂದೆಡೆ ಆರ್ ಸಿಬಿಗೆ 16 ರನ್ ಒಳಗೆ ಕಡಿವಾಣ ಹಾಕಬೇಕಿತ್ತು. ಆದರೆ ದಯಾಳ್ ಎಸೆದ ಮೊದಲ ಎಸೆತವನ್ನೇ ಧೋನಿ 110 ಮೀ. ದೂರದ ಸಿಕ್ಸರ್ ಸಿಡಿಸಿ ಆಘಾತ ಮೂಡಿಸಿದರು. ಆದರೆ ದಯಾಳ್ ಎರಡನೇ ಎಸೆತದಲ್ಲಿ ಧೋನಿ ವಿಕೆಟ್ ಪಡೆದು ಆಘಾತ ನೀಡಿದರು.
ನಂತರ ಬಂದ ಶಾರ್ದೂಲ್ ಠಾಕೂರ್ ಒಂದು ಡಾಟ್ ಬಾಲ್ ಮಾಡಿ ನಂತರ ಎಸೆತದಲ್ಲಿ ಒಂದು ರನ್ ತೆಗೆದರು. ಕೊನೆಯ ಎರಡು ಎಸೆತದಲ್ಲಿ 10 ರನ್ ಗಳಿಸಬೇಕಿದ್ದಾಗ ಜಡೇಜಾ ಎರಡೂ ಎಸೆತಗಳಲ್ಲಿ ರನ್ ಗಳಿಸಲು ವಿಫಲರಾದರು ಈ ಮೂಲಕ ಆರ್ ಸಿಬಿ, ಹಾಲಿ ಚಾಂಪಿಯನ್ ಚೆನ್ನೈ ಮಣಿಸಿ ಅಗ್ರ 4ರೊಳಗೆ ಪ್ರವೇಶಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿತು.
ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಬೆಂಗಳೂರು ಮೂಲದ ರಚಿತ್ ರವಿಂದರ್ ಮತ್ತು ಅಜಿಂಕ್ಯ ರಹಾನೆ ಮೂರನೇ ವಿಕೆಟ್ ಗೆ 66 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ರಚಿತ್ ರವಿಂದರ್ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 61 ರನ್ ಬಾರಿಸಿದರೆ, ರಹಾನೆ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 33 ರನ್ ಗಳಿಸಿದರು. ಈ ಹಂತದಲ್ಲಿ ಆರ್ ಸಿಬಿ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ಪಂದ್ಯ ರೋಚಕ ತಿರುವು ಪಡೆಯಿತು.