ಬಿಜೆಪಿ ಕಳೆದ ಬಾರಿ 2019ರ ಫಲಿತಾಂಶ ಪುನರಾವರ್ತನೆ ಆಗಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ 300 ಸ್ಥಾನ ಗೆಲ್ಲಬಹುದು ಎಂದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಬಿಜೆಪಿ ಅಬ್ ಕೀ ಬಾರಿ 400 ಪಾರ್ (ಈ ಬಾರಿ 400ಕ್ಕಿಂತ ಅಧಿಕ) ಎಂದು ಹೇಳಿಕೊಳ್ಳುತ್ತಿದ್ದಾರೆ. ಏಕೆಂದರೆ ಈ ಮೂಲಕ ಚುನಾವಣೆಯಲ್ಲಿ ಅಜೆಂಡಾ ಸಿದ್ಧಪಡಿಸುತ್ತಿದ್ದಾರೆ. ಆದರೆ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಏನೇ ಲೆಕ್ಕಾಚಾರ ಹಾಕಿದರೂ 300ರಿಂದ 370 ಅಥವಾ ಕಳೆದ ಬಾರಿಯಷ್ಟೇ ಸ್ಥಾನ ಗೆಲ್ಲಬಹುದು ಎಂದು ಅವರು ಹೇಳಿದರು.
ನನಗೆ ಪ್ರಧಾನಿ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ ಪ್ರತಿಪಕ್ಷಗಳು ಸಿಕ್ಕ ಅವಕಾಶವನ್ನು ಕಳೆದುಕೊಂಡಿವೆ. ಇದರಿಂದ ಬಿಜೆಪಿ 300 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. 270 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಅವರು ಹೇಳಿದರು.
ಕಳೆದ ಬಾರಿ ಬಿಜೆಪಿಗೆ 303 ಸ್ಥಾನ ಗೆದ್ದಿದ್ದು ಇದರಲ್ಲಿ 250 ಸ್ಥಾನ ವಾಯುವ್ಯ ಭಾರತದಿಂದ ಬಂದಿದ್ದವು. ಈ ಬಾರಿ ಈ ಭಾಗದಲ್ಲಿ 50 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಈಶಾನ್ಯ ಭಾಗ ಅಥವಾ ಮಧ್ಯ ಭಾರತದಲ್ಲಿ ಈ ಸ್ಥಾನ ಪಡೆಯುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲಿ 15-20 ಸ್ಥಾನ ಹೆಚ್ಚು ಗೆಲ್ಲುವ ಸಾಧ್ಯತೆ ಇದೆ ಎಂದು ಅವರು ವಿಶ್ಲೇಷಿಸಿದರು.