ಪ್ರತಿಪಕ್ಷವಾಗಿ ಕೂರಲು ನಿರ್ಧರಿಸಿದ್ದೇವೆ. ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡುತ್ತೇವೆ. ಈ ಮೂಲಕ ಜನರಿಗೆ ಬಿಜೆಪಿ ಆಡಳಿತದ ಪರಿಣಾಮಗಳನ್ನು ತಿಳಿಸಿಕೊಡಲಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ಸ್ಥಾನದಲ್ಲಿ ನಾವು ಕೂರಲು ನಿರ್ಧರಿಸಿದ್ದೇವೆ ಎಂದರು.
ಇಂಡಿಯಾ ಮೈತ್ರಿಕೂಟ ಬಿಜೆಪಿ ಜನವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮುಂದುವರಿಸಲಿದೆ. ಜನರಿಗೆ ಬಿಜೆಪಿ ಆಡಳಿತವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮುಂದುವರಿಸುತ್ತೇವೆ. ಈ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡಲಿದ್ದೇವೆ ಎಂದು ಅವರು ಹೇಳಿದರು.
ಮೋದಿ ವಿರುದ್ಧ ಜನಾದೇಶ ಸ್ಪಷ್ಟವಾಗಿದೆ. ಮೋದಿ ಮತ್ತು ಬಿಜೆಪಿ ಆಡಳಿತ ಮಾದರಿ ಜನವಿರೋಧಿ ಎಂಬುದು ಈ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಮೋದಿ ಅವರಿಗೆ ವೈಯಕ್ತಿಕವಾಗಿ ನೈತಿಕ ಸೋಲು ಇದಾಗಿದೆ. ರಾಜಕೀಯವಾಗಿ ಭಾರೀ ಹಿನ್ನಡೆ ಆಗಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.
ಸರ್ಕಾರ ರಚನೆಗೆ ಪ್ರಯತ್ನ ನಡೆಸಿದ್ದ ಕಾಂಗ್ರೆಸ್, ಜೆಡಿಯುನ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲ ಕೋರಿ ಸಂಪರ್ಕಿಸಿತ್ತು. ಆದರೆ ಇಬ್ಬರೂ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಲಿಖಿತ ಒಪ್ಪಿಗೆ ಪತ್ರ ನೀಡಿದೆ.