ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮತ್ತೆ ಟಾಸ್ ಸೋತಿದ್ದಾರೆ. ಈ ಮೂಲಕ ಕಳೆದ 11 ಪಂದ್ಯಗಳಲ್ಲಿ 10ನೇ ಬಾರಿ ಟಾಸ್ ಸೋತಿದ್ದಾರೆ.
ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರ್ರನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟಾಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಋತುರಾಜ್ ಗಾಯಕ್ವಾಡ್ ನಾಯಕನಾಗಿ ಆಡಿದ 11 ಪಂದ್ಯಗಳಲ್ಲಿ 10ನೇ ಬಾರಿ ಸೋತಿದ್ದೇನೆ. ಟಾಸ್ ಗೆಲುವಿಗಿಂತ ಪಂದ್ಯ ಗೆಲ್ಲುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಸೋಲುಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಈ ಪಂದ್ಯ ಗೆದ್ದು ಸೇಡು ತೀರಿಸಿಕೊಳ್ಳುವುದೂ ಅಲ್ಲದೇ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಗುರಿ ಹೊಂದಿದೆ.