ಇತ್ತೀಚೆಗೆ ಭಾರತ ಟೆಸ್ಟ್ ತಂಡಕ್ಕೆ ಪಾದರ್ಪಣೆ ಮಾಡಿದ ಸರ್ಫರಾಜ್ ಖಾನ್ ಸೋದರ ಮುಶೀರ್ ಖಾನ್ ರಣಜಿ ಟ್ರೋಫಿ ಫೈನಲ್ ನಲ್ಲಿ ಮುಂಬೈ ಪರ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಆಡುತ್ತಿರುವ ಮುಶೀರ್ ಖಾನ್ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದರು. ಈ ಮೂಲಕ ರಣಜಿ ಫೈನಲ್ ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ ಮನ್ ಎಂದು ಸಚಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಮುಶೀರ್ ಖಾನ್ ವಯಸ್ಸು 19 ವರ್ಷ 14 ದಿನಗಳಾಗಿದ್ದು, ರಣಜಿ ಫೈನಲ್ ನಲ್ಲಿ ಶತಕ ಸಿಡಿಸಿದ ಕಿರಿಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. 1994ರಲ್ಲಿ ಪಂಜಾಬ್ ವಿರುದ್ಧದ ಫೈನಲ್ ನಲ್ಲಿ ಮುಂಬೈ ಪರ ಸಚಿನ್ ತೆಂಡೂಲ್ಕರ್ 22 ವರ್ಷ ವಯಸ್ಸಾಗಿದ್ದಾಗ ಅವಳಿ ಶತಕ ಬಾರಿಸಿದ್ದರು.
ಮುಶೀರ್ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮುಶೀರ್ 326 ಎಸೆತಗಳಲ್ಲಿ 10 ಬೌಂಡರಿ ಸಹಾಯದಿಂದ 136 ರನ್ ಗಳಿಸಿದ್ದರು. ಮುಶೀರ್ ಶತಕದ ಸಹಾಯದಿಂದ ಮುಂಬೈ ವಿದರ್ಭ ವಿರುದ್ಧ 500 ರನ್ ಗಳ ಒಟ್ಟಾರೆ ಮುನ್ನಡೆ ಪಡೆದು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ. ವಿದರ್ಭ ಗೆಲ್ಲಲು 528 ರನ್ ಗುರಿ ಪಡೆದಿದ್ದು, ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿದೆ.