ಕರ್ನಾಟಕ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಬಿಜೆಪಿ ಛಲವಾದಿ ನಾರಾಯಣಸ್ವಾಮಿ ನೇಮಕಗೊಂಡಿದ್ದಾರೆ. ಈ ಮೂಲಕ ಪಕ್ಷದ ಹಿರಿಯ ಮುಖಂಡರಾದ ಸಿಟಿ ರವಿ ಮತ್ತು ಎನ್. ರವಿಕುಮಾರ್ ಅವರನ್ನು ಕಡೆಗಣಿಸಲಾಗಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೇ ಮೊದಲ ಬಾರಿ ವಿಧಾನಪರಿಷತ್ ಪ್ರವೇಶಿಸಿರುವ ಎಸ್ ಸಿ ಸಮುದಾಯದ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿಟಿ ರವಿ ಮತ್ತು ರವಿಕುಮಾರ್ ನಡುವೆ ಪೈಪೋಟಿ ನಡೆದಿದೆ ಎಂದೇ ಹೇಳಲಾಗುತ್ತಿತ್ತು. ಸಿಟಿ ರವಿ ಮೂರು ಬಾರಿ ಶಾಸಕರಾಗಿ ಈ ಬಾರಿ ವಿಧಾನಸಭೆಯಲ್ಲಿ ಸೋಲುಂಡಿದ್ದರಿಂದ ಮೇಲ್ಮನೆ ಪ್ರವೇಶಿಸಿದ್ದರು. ಎನ್.ರವಿಕುಮಾರ್ ಬಿಜೆಪಿಯ ವಿಧಾನಪರಿಷತ್ ಸದಸ್ಯರಾಗಿ ಮರು ಆಯ್ಕೆಯಾಗಿದ್ದರು.
ಈ ಇಬ್ಬರು ಹಿರಿಯರನ್ನು ಕಡೆಗಣಿಸಿದ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ನಿಂದ ವಲಸೆ ಬಂದಿರುವ ಎಸ್ ಸಿ ಸಮುದಾಯದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ.
ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒತ್ತಾಸೆ ಮೇರೆಗೆ ಛಲವಾದಿ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.