ರಾಜ್ಯಾದ್ಯಂತ ನಿವೃತ್ತ ಇಂಜಿನಿಯರ್ ಗಳು, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಒಟ್ಟಾರೆ 4.51 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
11 ಪ್ರಕರಣಗಳಿಗೆ ಸಂಬಂಧಿಸಿ ಗುರುವಾರ ಬೆಳಿಗ್ಗೆ ಬೆಂಗಳೂರು, ಮಂಡ್ಯ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಕೋಲಾರ, ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ 9 ಜಿಲ್ಲೆಗಳ ಒಟ್ಟು 56 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳ ತಂಡದ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿತು.
ಬೆಳಗಾವಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ ಮಹದೇವ್ ಬನ್ನೂರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಾರ್ಯಪಾಲಕ ಇಂಜಿನಿಯರ್ ಡಿ.ಹೆಚ್ ಉಮೇಶ್, ದಾವಣಗೆರೆಯ ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ ಎಸ್ ಪ್ರಭಾಕರ್, ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಕುರಡಗಿ, ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಎಂ.ರವೀಂದ್ರ ಮತ್ತು ಲೋಕಾಯುಕ್ತ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ, ಮಂಡ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಶಿವರಾಜು, ರಾಮನಗರದ ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ, ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಮಹೇಶ್ ಕೆ, ಪಂಚಾಯಿತಿ ಕಾರ್ಯದರ್ಶಿ ಎನ್.ಎಂ.ಜಗದೀಶ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.
ಲೋಕಾಯುಕ್ತ ದಾಳಿಯಲ್ಲಿ ಯಾರ ಮನೆಯಲ್ಲಿ ಎಷ್ಟು ಸಿಕ್ಕಿತು?
ಬಿಬಿಎಂಪಿ ಮಹದೇವಪುರ ಕಂದಾಯ ಅಧಿಕಾರಿ ಬಸವರಾಜ್ ಮಗಿ
15 ನಿವೇಶನ, 2 ವಾಸದ ಮನೆ, 32 ಎಕರೆ ಕೃಷಿ ಜಮೀನು, 59 ಲಕ್ಷ ಮೌಲ್ಯದ ಚಿನ್ನಾಭರಣ, 583 ಕ್ಯಾಸಿನೋ ಕಾಯಿನ್ ಸೇರಿ 3.31 ಕೋಟಿ ಮೌಲ್ಯದ ಆಸ್ತಿ ಪತ್ತೆ.
ಬೆಳಗಾವಿಯ ಎಇಇ ಮಹದೇವ ಬನ್ನೂರು
1 ಕೋಟಿ ಮೌಲ್ಯದ 3 ವಾಸದ ಮನೆ, 1.84 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 7.50 ಲಕ್ಷ ಮೌಲ್ಯದ ವಾಹನ ಸೇರಿ 97.51 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಚಿಕ್ಕಮಗಳೂರಿನ ಇಇ ಕೆಪಿಟಿಸಿಎಲ್ ಡಿಎಚ್ ಉಮೇಶ್
4 ನಿವೇಶನ, 4 ವಾಸದ ಮನೆ, 2 ಎಕರೆ ಕೃಷಿ ಜಮೀನು, 40 ಲಕ್ಷ ಮೌಲ್ಯದ ಚಿನ್ನಾಭರಣ, 15 ಲಕ್ಷ ಮೌಲ್ಯದ ವಾಹನ ಸೇರಿ 5.38 ಕೋಟಿ ಮೌಲ್ಯದ ಆಸ್ತಿ ಪತ್ತೆ.
ದಾವಣಗೆರೆಯ ಎಇಇ ಬೆಸ್ಕಾಂ ವಿಜಿಲೆನ್ಸ್ ಎಂ.ಎಸ್.ಪ್ರಭಾಕರ್
2 ನಿವೇಶನ, 2 ವಾಸದ ಮನೆ, 4.33 ಎಕರೆ ಕೃಷಿ ಜಮೀನು, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 50 ಸಾವಿರ ಮೌಲ್ಯದ ವಾಹನ, 10 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 2.01 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ.
ಬೆಳಗಾವಿಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ
5 ನಿವೇಶನ, 4 ವಾಸದ ಮನೆ, 83 ಎಕರೆ ಕೃಷಿ ಜಮೀನು, 16.90 ಲಕ್ಷ ಮೌಲ್ಯದ ಚಿನ್ನಾಭರಣ, 8.45 ಲಕ್ಷ ಮೌಲ್ಯದ ವಾಹನ. 8.45 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 7.88 ಕೋಟಿ ಮೌಲ್ಯದ ಆಸ್ತಿ ಪತ್ತೆ.
ಲೋಕೋಪಯೋಗಿ ನಿವೃತ್ತ ಮುಖ್ಯ ಅಭಿಯಂತರ ಎಂ.ರವೀಂದ್ರ
4 ನಿವೇಶನ, 6 ವಾಸದ ಮನೆ, ಕೃಷಿ ಜಮೀನು ಸೇರಿ 3 ಕೋಟಿ ರೂ. ಮೌಲ್ಯದ ಜಮೀನು, 83 ಲಕ್ಷ ಮೌಲ್ಯದ ಚಿನ್ನಾಭರಣ, 1 ಕೋಟಿ ರೂ. ಮೌಲ್ಯದ ವಾಹನಗಳು, 50 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 5.75 ಕೋಟಿ ಮೌಲ್ಯದ ಆಸ್ತಿ ಪತ್ತೆ.
ಮಂಡ್ಯದ ಗ್ರಾಮೀಣ ಕುಡಿಯುವ ನೀರು ಇಲಾಖೆಯ ನಿವೃತ್ತ ಇಇ ಶಿವರಾಜ್
3 ನಿವೇಶನ, 3 ವಾಸದ ಮನೆ, 10 ಎಕರೆ ಕೃಷಿ ಜಮೀನು, 6 ಲಕ್ಷ ನಗದು, 7 ಲಕ್ಷ ಮೌಲ್ಯದ ಚಿನ್ನಾಭರಣ, 90 ಲಕ್ಷ ಮೌಲ್ಯದ ವಾಹನಗಳು, 2 ಕೋಟಿ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 5.08 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ.
ಹಾರೋಹಳ್ಳಿ ತಹಸೀಲ್ದಾರ್ ವಿಜಯಣ್ಣ
8 ವಾಸದ ಮನೆ, 13 ಎಕರೆ ಕೃಷಿ ಜಮೀನು, 2 ಲಕ್ಷ ನಗದು, 22 ಲಕ್ಷ ಮೌಲ್ಯದ ಚಿನ್ನಾಭರಣ, 43 ಲಕ್ಷ ಮೌಲ್ಯದ ವಾಹನಗಳು, 34 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 2.45 ಕೋಟಿ ಆಸ್ತಿ ಪತ್ತೆ.
ಮೈಸೂರು ಕಬಿನಿ, ವರುಣಾ ನಾಲಾ ಅಧೀಕ್ಷಕ ಅಭಿಯಂತರ ಮಹೇಶ್ ಕೆ.
3 ನಿವೇಶನ, 3 ವಾಸದ ಮನೆ, 11 ಎಕರೆ ಕೃಷಿ ಜಮೀನು, 22.80 ಲಕ್ಷ ಮೌಲ್ಯದ ಚಿನ್ನಾಭರಣ, 4 ಲಕ್ಷ ಮೌಲ್ಯದ ವಾಹನ, 76 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ.
ದಾಸನಪುರ ಗ್ರಾ.ಪಂ. ಗ್ರೇಡ್-1 ಕಾರ್ಯದರ್ಶಿ ಎಂ.ಎನ್. ಜಗದೀಶ್
3 ವಾಸದ ಮನೆ, 2.28 ಎಕರೆ ಕೃಷಿ ಜಮೀನು, 28 ಲಕ್ಷ ನಗದು, 1,21 ಕೋಟಿ ಮೌಲ್ಯದ ಚಿನ್ನಾಭರಣ, 33 ಲಕ್ಷದ ವಾಹನಗಳು ಸೇರಿ 3.22 ಕೋಟಿ ಮೌಲ್ಯದ ಆಸ್ತಿ ಪತ್ತೆ.