ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಪ್ರಸಾದವಾಗಿ ನೀಡಲಾಗುವ ಜನಪ್ರಿಯ ಲಡ್ಡುವಿನಲ್ಲಿ ಮೀನಿನ ಎಣ್ಣೆ ಮತ್ತು ದನದ ಕೊಬ್ಬು ಮಿಶ್ರಣ ಆಗಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದ, ಅನ್ನದಾನದಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಪ್ರಾಣಿಗಳ ಕೊಬ್ಬು ಕೂಡ ಮಿಶ್ರಣ ಮಾಡಲಾಗುತ್ತಿದೆ. ಇದರಿಂದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಲ್ಯಾಬ್ ವರದಿ ಹೊರಬಿದ್ದಿದೆ.
ತಿರುಪತಿ ಲಡ್ಡುಗೆ ಈ ಹಿಂದೆ ಕರ್ನಾಟಕದ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ಆದರೆ ದುಬಾರಿ ಎಂಬ ಕಾರಣಕ್ಕೆ ತಮಿಳುನಾಡಿನ ಕಂಪನಿಯೊಂದರಿಂದ ಹಿಂದಿನ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರ ಖರೀದಿಸುತ್ತಿತ್ತು. ಮಾರುಕಟ್ಟೆಯಲ್ಲಿ ಕೆಜಿ ತುಪ್ಪಗೆ 1000 ರೂ. ದರ ಇದ್ದರೂ ತಮಿಳುನಾಡು ಕಂಪನಿಯಿಂದ ಕೆಜಿಗೆ 320 ರೂ.ಗೆ ತುಪ್ಪ ಖರೀದಿಸಲಾಗುತ್ತಿತ್ತು.
ತಮಿಳುನಾಡಿನ ಕಂಪನಿಯೊಂದರಿಂದ ತರಿಸಿಕೊಳ್ಳುತ್ತಿದ್ದ ತುಪ್ಪ ಕಲಬರಕೆಯದ್ದಾಗಿದ್ದು, ಇಷ್ಟು ಕಡಿಮೆ ಬೆಲೆಗೆ ತುಪ್ಪ ತರಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಅಲ್ಲದೇ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಮುಖಂಡರು ಈ ಬಗ್ಗೆ ಪದೇಪದೇ ಆರೋಪ ಮಾಡಿದ್ದರೂ ಯಾರೂ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.
ಇದೀಗ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಲ್ಯಾಬ್ ಪರೀಕ್ಷೆಯಲ್ಲಿ ತಿರುಪತಿ ಲಡ್ಡುವಿನಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಮಿಶ್ರಣ ಆಗಿರುವುದನ್ನು ದೃಢಪಡಿಸಿದೆ. ಅಲ್ಲದೇ ಲಡ್ಡು ತಯಾರಿಕೆಯಲ್ಲಿ ಸೊಯಾ ಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಕೂಡ ಮಿಶ್ರಣ ಮಾಡಲಾಗಿದೆ ಎಂದು ವರದಿ ಹೇಳಿದೆ.