ಭಾರತ ತಂಡದಲ್ಲಿ ಸ್ಥಾನ ಗಳಿಸಲು ತೀವ್ರ ಸ್ಪರ್ಧೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕೆಲವು ಆಟಗಾರರು ವಿಚಿತ್ರ ರೀತಿಯಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಇದರ ನಡುವೆ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ವೈಖರಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ದುಲೀಪ್ ಟ್ರೋಫಿ ಪಂದ್ಯದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬ್ಯಾಟಿಂಗ್ ಗೆ ಇಳಿದಿದ್ದಾರೆ. 7 ಎಸೆತಗಳನ್ನು ಎದುರಿಸಿದ ಅಯ್ಯರ್ ಒಂದೂ ರನ್ ಗಳಿಸದೇ ಶೂನ್ಯಕ್ಕೆ ಔಟಾಗಿದ್ದಾರೆ.
ಕೂಲಿಂಗ್ ಗ್ಲಾಸ್ ಅನ್ನು ಸಾಮಾನ್ಯವಾಗಿ ಫೀಲ್ಡರ್ ಗಳು ಧರಿಸುತ್ತಾರೆ. ಇತ್ತೀಚೆಗೆ ವಿಕೆಟ್ ಕೀಪರ್ ಗಳು ಕೂಡ ಕೂಲಿಂಗ್ ಧರಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಬೌಲರ್ ಗಳು ಅದರಲ್ಲೂ ಸ್ಪಿನ್ನರ್ ಗಳು ಕೂಡ ಕೆಲವೊಮ್ಮೆ ಬೌಲಿಂಗ್ ಮಾಡುವಾಗ ಕೂಲಿಂಗ್ ಗ್ಲಾಸ್ ಧರಿಸಿದ ಉದಾಹರಣೆಗಳು ಕೂಡ ಸಾಕಷ್ಟಿವೆ. ಆದರೆ ಬ್ಯಾಟ್ಸ್ ಮನ್ ಗಳು ಬ್ಯಾಟಿಂಗ್ ಮಾಡುವಾಗ ಕೂಲಿಂಗ್ ಧರಿಸುವುದಿಲ್ಲ.
ಹೆಲ್ಮೆಟ್ ಹಾಕಿ ಬ್ಯಾಟಿಂಗ್ ಮಾಡುವುದೇ ಕಷ್ಟ. ಅದರಲ್ಲಿ ಕೂಲಿಂಗ್ ಗ್ಲಾಸ್ ಹಾಕಿದರೆ ಚೆಂಡು ಕಾಣಿಸುವುದಿಲ್ಲ. ಇದರಿಂದ ರನ್ ಗಳಿಸುವುದಿರಲಿ ವಿಕೆಟ್ ಉಳಿಸಿಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಶ್ರೇಯಸ್ ಅಯ್ಯರ್ ಕೂಲಿಂಗ್ ಗ್ಲಾಸ್ ಧರಿಸಿ ಬ್ಯಾಟಿಂಗ್ ಗೆ ಇಳಿದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಇದೆ. ಅದರಲ್ಲೂ ಕಠಿಣ ಅಭ್ಯಾಸದ ಜೊತೆಗೆ ಅವಕಾಶ ಸಿಕ್ಕಾಗ ಯಶಸ್ಸು ಸಾಧಿಸಿದರೂ ತಂಡದಲ್ಲಿ ಕಾಯಂ ಸ್ಥಾನ ಸಿಗುವುದು ಅನುಮಾನವಾಗಿದೆ. ಇಂತಹ ಸಂದರ್ಭದಲ್ಲಿ ಗಂಭೀರವಾಗಿ ಆಟದತ್ತ ಗಮನ ಕೊಡುವ ಬದಲು ಕೂಲಿಂಗ್ ಗ್ಲಾಸ್ ಧರಿಸಿ ಬ್ಯಾಟಿಂಗ್ ಗೆ ಇಳಿದಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.