ಯಾದಗಿರಿಯಲ್ಲಿ ಪಿಎಸ್ ಐ ಅಸಹಜವಾಗಿ ಮೃತಪಟ್ಟ ಬೆನ್ನಲ್ಲೇ ಇದೀಗ ಬೆಂಗಳೂರು ಹೊರವಲಯದಲ್ಲಿ ಎಸ್ ಐ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವರ್ಗಾವಣೆ ದಂಧೆಗೆ ಸಾಲು ಸಾಲು ಪೊಲೀಸ್ ಅಧಿಕಾರಿಗಳು ಸಾವಿನ ಹಾದಿ ಹಿಡಿಯುವಂತಾಗಿದೆ.
ಯಾದಗಿರಿಯಲ್ಲಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಿಕೊಂಡು ಮನೆಗೆ ಮರಳಿದ್ದ ಪಿಎಸ್ ಐ ಪರಶುರಾಮ್ ಹೃದಯಘಾತದಿಂದ ಮೃತಪಟ್ಟಿದ್ದರು.
ಈ ಕಹಿ ಘಟನೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಇನ್ ಸ್ಪೆಕ್ಟರ್ ತಿಮ್ಮೇಗೌಡ ರಾಮನಗರ ಬಿಡದಿ ಬಳಿಯ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಕುಂಬಳಗೂಡಿನ ಇನ್ ಸ್ಪಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಿಮ್ಮೇಗೌಡ 2 ತಿಂಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿದ್ದರು. ಇದೀಗ ಸಿಸಿಬಿಗೆ ತಿಮ್ಮೇಗೌಡ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿತ್ತು.
ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮೇಗೌಡ ಕಳೆದ ವರ್ಷ ಚುನಾವಣೆ ವೇಳೆ ಅತ್ತಿಬೆಲೆ ಪೊಲೀಸ್ ಠಾಣೆಗೆ ವರ್ಗವಣೆಗೊಂಡಿದ್ದರು.
ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದಲ್ಲಿ ಹೊಣೆ ಮಾಡಿ ಸಸ್ಪೆಂಡ್ ಮಾಡಲಾಗಿತ್ತು. ಮಾಡದ ತಪ್ಪಿಗೆ ಅತ್ತಿಬೆಲೆ ಇನ್ಸ್ ಪೆಕ್ಟರ್ ಆಗಿದ್ದ ತಿಮ್ಮೇಗೌಡ ರನ್ನ ಸಸ್ಪೆಂಡ್ ಆಗಿದ್ದರು ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ತಿಮ್ಮೇಗೌಡ ಬೇಸತ್ತಿದ್ದರು ಎಂದು ಹೇಳಲಾಗಿದೆ.
ತಿಮ್ಮೇಗೌಡರು ಆತ್ಮಹತ್ಯೆಗೂ ಮುನ್ನ ಯಾವುದೇ ಡೆತ್ ನೋಟ್ ಬರೆಯದೇ ಇರುವುದು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.