ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್ ಐಟಿ ಪೊಲೀಸರು ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಿದಂತೆಲ್ಲಾ ಹೊಸ ಹೊಸ ಹಗರಣಗಳು ಹೊರಗೆ ಬರುತ್ತಿವೆ. ಪ್ರಕರಣ ಸಂಬಂಧ ಇದುವರೆಗೆ ಬಂಧಿಸಲಾಗಿರುವ 11 ಮಂದಿಯ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ನಿಗಮದಿಂದ 193 ನಕಲಿ ಖಾತೆಗಳನ್ನು ಪತ್ತೆಹಚ್ಚಿರುವ ಎಸ್ ಐಟಿ ಪೊಲೀಸರು, ನಕಲಿ ಖಾತೆಗಳಿಗೆ ಕೂಡ ಕೋಟ್ಯಂತರ ರೂಪಾಯಿ ಹೋಗಿರುವ ಸಾಧ್ಯತೆ ಇದ್ದು, ಇನ್ನಷ್ಟು ನಕಲಿ ಖಾತೆಗಳ ಪತ್ತೆಗೆ ಮುಂದಾಗಿದ್ದಾರೆ.
ವಾಲ್ಮಿಕಿ ನಿಗಮದಲ್ಲಿ 145 ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಒತ್ತಡ ಹೇರಿತ್ತು.
ಪ್ರಕರಣದಲ್ಲಿ ಇದುವರೆಗೆ ಪೊಲೀಸರು ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಸುಮಾರು 193 ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದು, 10 ಕೋಟಿ ರೂ.ವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ 14 ಕೋಟಿ ರೂ., ನಕಲಿ ಬ್ಯಾಂಕ್ ಖಾತೆಗಳಿಂದ 10 ಕೋಟಿ ರೂ. ಹಾಗೂ 4 ಕೋಟಿ ರೂ. ಮೌಲ್ಯದ ಮುಟ್ಟುಗೋಲು ಹಾಕಿಕೊಂಡ ಚಿನ್ನಾಭರಣ ಸೇರಿದಂತೆ ಒಟ್ಟಾರೆ 28 ಕೋಟಿ ಸ್ವತ್ತವನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಯೊಬ್ಬರ ಖಾತೆಗೆ 2 ಲಕ್ಷದಿಂದ 2 ಕೋಟಿವರೆಗೆ ಹಣ ವರ್ಗಾವಣೆ ಮಾಡಲಾಗಿದೆ. ಬಹುತೇಕ ಫಲಾನುಭವಿಗಳು ಅರ್ನಹರಾಗಿದ್ದು, ಅರ್ಹ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಇದೆ.
ಹೈದರಾಬಾದ್ ನಲ್ಲಿ ಶ್ರೀನಿವಾಸ್ ಅವರನ್ನು ಬಂಧಿಸುವ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿದ್ದು, ಬಂಧಿತರಲ್ಲಿ ಮಧ್ಯವರ್ತಿಗಳು, ಫಲಾನುಭವಿಗಳು ಸೇರಿದ್ದಾರೆ.