ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದಕ್ಷಿಣ ಆಫ್ರಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಮಂದಾನ 127 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 117 ರನ್ ಗಳಿಸಿ ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಈ ಮೂಲಕ ಮಂದಾನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 7000 ರನ್ ಪೂರೈಸಿದ ಮತ್ತೊಂದು ದಾಖಲೆಗೆ ಪಾತ್ರರಾದರು.
ಸ್ಮೃತಿ ಮಂದಾನ ಅಂತಾರಾಷ್ಟ್ರಿಯ ಕ್ರಿಕೆಟ್ ನಲ್ಲಿ 7059 ರನ್ ಗಳಿಸಿದರು. ಈ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಭಾರತದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ 10,868 ರನ್ ಕಲೆ ಹಾಕಿ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಮತ್ತೊಬ್ಬ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 6870 ರನ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಸ್ಮೃತಿ ಮಂದಾನಕ್ಕಿಂತ ಅಲ್ಪ ರನ್ ಗಳಿಂದ ಹಿಂದಿದ್ದಾರೆ.
ಸ್ಮೃತಿ ಮಂದಾನಗೆ ಇದು 6ನೇ ಶತಕವಾಗಿದ್ದು, 83 ಪಂದ್ಯಗಳಲ್ಲಿ ಸಾಧಿಸಿದ್ದಾರೆ. ಮಿಥಾಲಿ ರಾಜ್ 7 ಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದು, 211 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಹರ್ಮನ್ ಪ್ರೀತ್ ಕೌರ್ 5 ಶತಕ ಗಳಿಸಿದ್ದು 112 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.