ಜಿದ್ದಾಜಿದ್ದಿನ ಹೋರಾಟದಲ್ಲಿ ಬಲಿಷ್ಠ ಸ್ಪೇನ್ ತಂಡ 2-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು 4ನೇ ಬಾರಿ ಯುರೋಕಪ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ದಾಖಲೆ ಬರೆದಿದೆ.
ಬರ್ಲಿನ್ ನಲ್ಲಿ ಭಾನುವಾರ ತಡರಾತ್ರಿ ನಡೆದ ಫೈನಲ್ ನಲ್ಲಿ ಸ್ಪೇನ್ ಪರ ನಿಕೊ ವಿಲಿಯಮ್ಸ್ (27ನೇ ನಿಮಿಷ) ಮತ್ತು ಮೈಕೆಲ್ ಓಯೆರ್ಬಾಲ್ (86ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರೆ, ಇಂಗ್ಲೆಂಡ್ ಪರ ಕೊಲೆ ಪಾಲಿಮರ್ (73ನೇ ನಿಮಿಷ) ಒಂದು ಗೋಲು ಬಾರಿಸಿದರು.
ಜಿದ್ದಾಜಿದ್ದಿನ ಪಂದ್ಯದಲ್ಲಿ ಸ್ಪೇನ್ ಪರ ನಿಕೊ ವಿಲಿಯಮ್ಸ್ ಮೊದಲ ಅವಧಿಯ ಆಟದಲ್ಲೇ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸ್ಪೇನ್ ಕೊನೆಯ ಹಂತದವರೆಗೂ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ಅವಧಿಯ ಆಟದಲ್ಲಿ ಜಿದ್ದಿಗೆ ಬಿದ್ದ ಇಂಗ್ಲೆಂಡ್ ಪರ ಕೊಲೆ ಪಾಲಿಮರ್ ಗೋಲು ಬಾರಿಸಿ ಸಮಬಲದ ಗೌರವ ತಂದುಕೊಟ್ಟರು.
ಮೈಕಲ್ ಓಯೆರ್ಬಾಲ್ 13 ನಿಮಿಷಗಳ ಅಂತರದಲ್ಲೇ ಸ್ಪೇನ್ ಪರ ಎರಡನೇ ಗೋಲು ಬಾರಿಸಿ ಇಂಗ್ಲೆಂಡ್ ತಂಡ ಸಂಭ್ರಮ ಕಸಿದುಕೊಂಡರು. ಈ ಸೋಲಿನೊಂದಿಗೆ ಇಂಗ್ಲೆಂಡ್ 58 ವರ್ಷಗಳ ಪ್ರಮುಖ ಟೂರ್ನಿಗಳ ಪ್ರಶಸ್ತಿ ಬರ ಮುಂದುವರಿದಂತಾಗಿದೆ.
ಇಂಗ್ಲೆಂಡ್ ಸತತ ಎರಡನೇ ಬಾರಿ ಯುರೋಕಪ್ ಫೈನಲ್ ನಲ್ಲಿ ಎಡವಿದೆ. 2020ರಲ್ಲಿ ಇಟಲಿ ವಿರುದ್ಧ ಪೆನಾಲ್ಟಿಯಲ್ಲಿ ಆಘಾತ ಅನುಭವಿಸಿತ್ತು. ಈ ಬಾರಿ ಗೆಲುವಿನ ಅವಕಾಶ ಇದ್ದರೂ ಸೋಲರಿಯದ ತಂಡವಾಗಿದ್ದ ಬಲಿಷ್ಠ ಸ್ಪೇನ್ ಸತತ 7 ಗೆಲುವಿನೊಂದಿಗೆ ಪ್ರಶಸ್ತಿಗೆ ಮುತ್ತಿಟ್ಟಿತು.