ಬೌಲರ್ ಗಳ ಮೇಲಾಟದಿಂದ ಒಂದೇ ದಿನ 15 ವಿಕೆಟ್ ಗಳು ಪತನಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನವಾದ ಶನಿವಾರ 1 ವಿಕೆಟ್ ಗೆ 37 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ಭೋಜನ ವಿರಾಮದ ನಂತರ ಕೆಲವೇ ಸಮಯದಲ್ಲಿ 189 ರನ್ ಗೆ ಆಲೌಟಾಯಿತು.
30 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ದಿನದಾಂತ್ಯಕ್ಕೆ 93 ರನ್ ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ ಇದೀಗ ಒಟ್ಟಾರೆ 63 ರನ್ ಗಳ ಮುನ್ನಡೆ ಸಾಧಿಸಿದೆ.
ಸ್ಪಿನ್ನರ್ ರವೀಂದ್ರ ಜಡೇಜಾ ಸ್ಪಿನ್ ಬಲೆಗೆ ಬಿದ್ದ ದ.ಆಫ್ರಿಕಾ ಬ್ಯಾಟ್ಸ್ ಮನ್ ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ನಾಯಕ ಟೆಂಬಾ ಬವುಮಾ (29) ಮಾತ್ರ ತಕ್ಕಮಟ್ಟಿಗೆ ಹೋರಾಟ ನಡೆಸಿದರು.
ಭಾರತದ ಪರ ಜಡೇಜಾ 4 ವಿಕೆಟ್ ಪಡೆದರೆ, ಸ್ಪಿನ್ನರ್ ಕುಲದೀಪ್ ಯಾದವ್ 2 ವಿಕೆಟ್ ಗಳಿಸಿದರು.
ಕುಸಿದ ಭಾರತ
ನಾಯಕ ಶುಭಮನ್ ಗಿಲ್ 4 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಗೊಂಡಿದ್ದು, ನಂತರ ಮೈದಾನಕ್ಕೆ ಇಳಿಯಲಿಲ್ಲ. ಭಾರತದ ಪರ ಕೆಎಲ್ ರಾಹುಲ್ (39), ವಾಷಿಂಗ್ಟನ್ ಸುಂದರ್ (29), ರಿಷಭ್ ಪಂತ್ (27), ರವೀಂದ್ರ ಜಡೇಜಾ (27) ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು.
ಸಿಮೊನ್ ಹಾರ್ಮರ್ 30 ರನ್ ನೀಡಿ ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ 35 ರನ್ ನೀಡಿ 3 ವಿಕೆಟ್ ಗಳಿಸಿದರು.


