ಫಾಫ್ ಡು ಪ್ಲೆಸಿಸ್ ಅವರನ್ನು ಬಿಟ್ಟುಕೊಟ್ಟ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ಯಾರು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಇದಕ್ಕೆ ಆರ್ ಸಿಬಿ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಪರೋಕ್ಷವಾಗಿ ಹೆಸರು ಬಹಿರಂಗಪಡಿಸಿದ್ದಾರೆ.
೨೦೨೫ನೇ ಸಾಲಿನ ಆಟಗಾರರನ್ನು ಉಳಿಸಿಕೊಳ್ಳುವ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಆರ್ ಸಿಬಿ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಮರಳಿ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಆರ್ ಸಿಬಿ ಸ್ಪಷ್ಟನೆ ನೀಡಿದರೂ ಈ ವಿಷಯವನ್ನು ಅಲ್ಲಗಳೆದಿರಲಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಅಬುಧಾಬಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲೂ ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಟ್ಟುಕೊಟ್ಟಿದ್ದ ಆರ್ ಸಿಬಿ ತಂಡವನ್ನು ಮುನ್ನಡೆಸಬಲ್ಲ ಕೆಎಲ್ ರಾಹುಲ್ ಸೇರಿದಂತೆ ಯಾವುದೇ ಆಟಗಾರರ ಖರೀದಿಗೆ ಆಸಕ್ತಿ ತೋರಲಿಲ್ಲ.
ಆರ್ ಸಿಬಿಯ ಇತ್ತೀಚಿನ ನಡವಳಿಕೆ ಗಮನಿಸಿದರೆ ವಿರಾಟ್ ಕೊಹ್ಲಿಯೇ ತಂಡದ ನಾಯಕತ್ವವನ್ನು ಮರಳಿ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೀಗ ಕೊಹ್ಲಿಯ ಆಪ್ತ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಕೂಡ ನಾಯಕತ್ವದ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡಿವಿಲಿಯರ್ಸ್ ತಂಡದ ಜೊತೆ ಈಗಲೂ ಉತ್ತಮ ಹೊಂದಾಣಿಕೆ ಹೊಂದಿದ್ದು, ತಂಡದಲ್ಲಿನ ಆಂತರಿಕ ವಿಷಯಗಳನ್ನು ಬಲ್ಲವರು. ಅಲ್ಲದೇ ವಿರಾಟ್ ಕೊಹ್ಲಿ ಜೊತೆ ನಿರಂತರ ಸಂಪರ್ಕವನ್ನು ಹೊಂದಿದ್ದಾರೆ.
ಇದೀಗ ತಮ್ಮದೇ ಯೂ ಟ್ಯೂಬ್ ನಲ್ಲಿ ಆರ್ ಸಿಬಿ ತಂಡದ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ್ದು, ಭಾರತ ತಂಡದ ಸ್ಟಾರ್ ಆಟಗಾರ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮುಂದೆ ಹೋಗಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸುವ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಕೊಹ್ಲಿ ನಾಯಕತ್ವ ವಹಿಸಲಿದ್ದಾರೆ ಎಂಬುದು ನನಗೆ ಲಭಿಸಿರುವ ಮಾಹಿತಿ ಎಂದು ಹೇಳಿದ್ದಾರೆ.
ಹರಾಜಿನಲ್ಲಿ ಆರ್ ಸಿಬಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದೆ. ಹಾಜೆಲ್ ವುಡ್ ಅವರನ್ನು ಖರೀದಿಸಿದ್ದು ಒಳ್ಳೆಯ ಆಯ್ಕೆ. ರಬಾಡ ಕೊನೆಯ ಕ್ಷಣದಲ್ಲಿ ಕೈ ತಪ್ಪಿದರೂ ಲುಂಗಿ ನಿಗ್ಡಿ ಅವರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ನಿಧಾನಗತಿ ಬೌಲಿಂಗ್ ಮಾಡುವುದರಲ್ಲಿ ಲುಂಗಿ ಪರಿಣತರು. ಒಂದು ವೇಳೆ ಅವರು ಉತ್ತಮ ಲಯದಲ್ಲಿದ್ದು, ಫಿಟ್ ಆಗಿದ್ದರೆ ತಂಡಕ್ಕೆ ದೊಡ್ಡ ಶಕ್ತಿಯಾಗಲಿದ್ದಾರೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ತಂಡಕ್ಕೆ ಅಗತ್ಯವಾದ ಕೆಲವು ಆಟಗಾರರು ಕೈ ತಪ್ಪಿದ್ದಾರೆ. ಇನ್ನು ಕೆಲವರು ಅನಿರೀಕ್ಷಿತವಾಗಿ ಬಂದಿದ್ದಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೂಕ್ತ ಹಾಗೂ ಸಮತೋಲಿತ ತಂಡವನ್ನು ಆಯ್ಕೆ ಮಾಡಲಾಗಿದೆ. ರವಿಚಂದ್ರನ್ ಅಶ್ವಿನ್ ಆರ್ ಸಿಬಿಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ ತಂಡದಲ್ಲಿ ಉತ್ತಮ ಸ್ಪಿನ್ನರ್ ಕೊರತೆ ಇದೆ. ಆದರೆ ಅಶ್ವಿನ್ ಚೆನ್ನೈ ತಂಡಕ್ಕೆ ಹೋಗಿದ್ದು ಕೂಡ ಖುಷಿಯಾಗಿದೆ.