ಬ್ಯಾಡ್ಮಿಂಟನ್ ಕೋಚ್ ತರಬೇತಿಗೆ ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಬ್ಯಾಡ್ಮಿಂಟನ್ ಕೋಚ್ ಸುರೇಶ್ ಬಾಲಾಜಿ (26) ಅವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕೋಚಿಂಗ್ ಸೇರಿದ್ದ ಬಾಲಕಿಯನ್ನು ಆಗಾಗ್ಗೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಬ್ಯಾಡ್ಮಿಂಟನ್ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಯಾರ ಬಳಿಯೂ ಬಾಯಿ ಬಿಡದಂತೆ ಬಾಲಕಿಗೆ ಹೇಳಿದ್ದ. ಅಲ್ಲದೇ ಈ ರೀತಿ ಹಲವು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದು ವಿಚಾರಣೆಗೆ ವೇಳೆ ಬೆಳಕಿಗೆ ಬಂದಿದೆ.
ಬಾಲಕಿ ರಜೆಗೆ ಅಜ್ಜಿಯ ಮನೆಗೆ ಬಂದಾಗ ಮೊಬೈಲ್ ನಿಂದ ತನ್ನ ನಗ್ನ ಪೋಟೋವನ್ನು ಸುರೇಶ್ಗೆ ಶೇರ್ ಮಾಡಿದ್ದಾಳೆ. ಕುಟುಂಬದವರು ಮೊಬೈಲ್ ನೋಡಿದಾಗ ಅಜ್ಜಿಗೆ ಆಘಾತವಾಗಿದ್ದು, ಕೂಡಲೇ ಪೋಷಕರನ್ನು ಕರೆಸಿ ವಿಷಯ ತಿಳಿಸಿದ್ದಾರೆ.
ಬಾಲಕಿಯನ್ನ ವಿಚಾರಿಸಿದಾಗ ಕೋಚ್ ಸುರೇಶ್ ದೌರ್ಜನ್ಯ ಬೆಳಕಿಗೆ ಬಂದಿದ್ದು, ಕೋಚ್ ಸುರೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಆರೋಪಿ ಮೊಬೈಲ್ ಪರಿಶೀಲನೆ ಮಾಡಿದಾಗ ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿರುವುದು ಕಂಡುಬಂದಿದೆ.
ಮೊಬೈಲ್ನಲ್ಲಿ 13 ರಿಂದ 16 ವರ್ಷ ವಯಸ್ಸಿನ ಹಲವು ಹುಡುಗಿಯರ ನಗ್ನ ಫೋಟೋಗಳು ಮತ್ತು ವೀಡಿಯೊಗಳು ಸಹ ಪತ್ತೆಯಾಗಿವೆ. ಆರೋಪಿ ಸುರೇಶ್ ಬಾಲಾಜಿಗೆ ನ್ಯಾಯಾಲಯ 8 ದಿನಗಳ ಕಾಲ ಕಸ್ಟಡಿಗೆ ನೀಡಿದೆ.


