ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರನ್ನು ವಾರ್ಷಿಕ ಗುತ್ತಿಗೆಯಿಂದ ಹಿಂಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ.
ಭಾರತೀಯ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆಯನ್ನು ಪರಿಷ್ಕರಣೆ ಮಾಡಲು ಬಿಸಿಸಿಐ ಮುಂದಾಗಿದ್ದು, ಪ್ರಮುಖ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಎ ಪ್ಲಸ್ ನಿಂದ ಹಿಂಬಡ್ತಿ ನೀಡಿ ವೇತನದಲ್ಲಿ 2 ಕೋಟಿ ರೂ. ಕಡಿತ ಮಾಡಲು ಮುಂದಾಗಿದೆ.
2025 ಏಪ್ರಿಲ್ ನಲ್ಲಿ ಗುತ್ತಿಗೆ ನಂತರ ಇದೀಗ ಈ ಇಬ್ಬರು ಆಟಗಾರರ ಗುತ್ತಿಗೆಯಲ್ಲಿ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದ್ದು, ಈ ನಿಟ್ಟಿನಲ್ಲಿ ಈ ಇಬ್ಬರು ಆಟಗಾರರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ ಪ್ಲಸ್, ಎ, ಬಿ ಮತ್ತು ಸಿ ಎಂಬ ನಾಲ್ಕು ವಿಭಾಗಗಳಿದ್ದು, ಮೂರೂ ಮಾದರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಡುವ ಹಾಗೂ ಪ್ರಮುಖ ಆಟಗಾರರಿಗೆ ಎಪ್ಲಸ್ ಸ್ಥಾನ ನೀಡಲಾಗುತ್ತಿದೆ. ಮೂರು ಮಾದರಿಯಲ್ಲಿ ಆಡುವರಿಗೆ ಎ ಹಾಗೂ ಯಾವುದಾದರೂ ಎರಡು ಅಥವಾ ಒಂದು ವಿಭಾಗದಲ್ಲಿ ಆಡುವ ಪ್ರಮುಖ ಆಟಗಾರರಿಗೆ ಬಿ ಹಾಗೂ ತಂಡದಲ್ಲಿ ಕಾಯಂ ಸ್ಥಾನ ಪಡೆಯದ ಆಟಗಾರರಿಗೆ ಸಿ ದರ್ಜೆ ಸ್ಥಾನ ನೀಡಲಾಗುತ್ತದೆ.
ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಜೊತೆ ಮನಸ್ತಾಪದಿಂದಾಗಿ ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಈ ಇಬ್ಬರೂ ಆಟಗಾರರು ಭರ್ಜರಿ ಫಾರ್ಮ್ ನಲ್ಲಿದ್ದು ಟೆಸ್ಟ್ ಕ್ರಿಕೆಟ್ ಗೆ ಮರಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


