ಭಾರತ ವನಿತೆಯರ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸುವ ಮೂಲಕ ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಇತಿಹಾಸದ ಹೊಸ್ತಿಲಲ್ಲಿದ್ದರೆ, ಆಟಗಾರ್ತಿಯರನ್ನು ಉತ್ತೇಜಿಸಲು ಬಿಸಿಸಿಐ ಬೃಹತ್ ಮೊತ್ತದ ಬಹುಮಾನ ಘೋಷಿಸುವ ಸಾಧ್ಯತೆ ಇದೆ.
ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 338 ರನ್ ಗುರಿ ಬೆಂಬತ್ತಿ ವಿಶ್ವಕಪ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತ ಬೆಂಬತ್ತಿದ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ ಭಾರತ ತಂಡ ಭಾನುವಾರ ನಡೆಯುವ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ವನಿತೆಯರ ತಂಡ ಇದೀಗ ಪುರುಷರ ತಂಡದ ಸಮವಾದ ಬಹುಮಾನ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಒಂದು ವೇಳೆ ಇದು ನಿಜವಾದರೆ ಭಾರತ ವನಿತೆಯರ ತಂಡ 125 ಕೋಟಿ ರೂ. ಬಹುಮಾನ ಮೊತ್ತ ಜೇಬಿಗಿಳಿಸಿಕೊಳ್ಳಲಿದೆ.
ಬಿಸಿಸಿಐ ಕಾರ್ಯದರ್ಶಿ ಹಾಗೂ ಐಸಿಸಿ ಮುಖ್ಯಸ್ಥರೂ ಆಗಿರುವ ಜೈ ಶಾ, ಬಹುಮಾನ ಮೊತ್ತ ಪುರುಷ ಹಾಗೂ ಮಹಿಳಾ ತಂಡಗಳಿಗೆ ಸಮಾನವಾಗಿ ನೀಡಬೇಕು ಎಂದು ಬಯಸಿದ್ದಾರೆ ಎಂದು ಹೇಳಲಾಗಿದೆ. ಭಾರತ ತಂಡ ಪ್ರಶಸ್ತಿ ಗೆದ್ದರೆ ಆಟಗಾರ್ತಿಯರು, ಕೋಚ್ ಹಾಗೂ ಸಿಬ್ಬಂದಿ ಸೇರಿ ಇಡೀ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ಲಭಿಸಲಿದೆ.
ನಾಯಕ ಮತ್ತು ಕೋಚ್ ಗೆ ಗರಿಷ್ಠ ಹಾಗೂ ಆಟಗಾರ್ತಿಯರಿಗೆ ದೊಡ್ಡ ಮೊತ್ತ ಹಂಚಿಕೆ ಆಗಲಿದ್ದು, ನಂತರ ಸಹಾಯಕ ಸಿಬ್ಬಂದಿಗೆ ಬಹುಮಾನ ಮೊತ್ತದ ಹಂಚಿಕೆ ಆಗ;ಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಟಿ-20 ವಿಶ್ವಕಪ್ ಗೆದ್ದಾಗ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಲಾಗಿತ್ತು. ಕೋಚ್ ರಾಹುಲ್ ದ್ರಾವಿಡ್ ಹೆಚ್ಚುವರಿ ಮೊತ್ತದ ಪಾಲು ಪಡೆಯಲು ನಿರಾಕರಿಸಿ ಆಟಗಾರರಿಗೆ ಸಮಾನವಾಗಿ ಹಂಚುವಂತೆ ಮನವಿ ಮಾಡಿದ್ದರು.


