ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅಭ್ಯಾಸದ ವೇಳೆ ಅಪಘಾತದ ವೇಳೆ ಗಾಯವಾಗಿದ್ದ ಮಂಡಿಗೆ ಚೆಂಡು ಬಡಿದು ಗಾಯಗೊಂಡಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಅನುಮಾನ ಉಂಟಾಗಿದೆ.
ಭಾರತ ಬುಧವಾರ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯವಾಡುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಭಿಯಾನ ಆರಂಭಿಸಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಇರುವಾಗ ದುಬೈನಲ್ಲಿ ನಡೆದ ಅಭ್ಯಾಸದ ವೇಳೆ ಪಂತ್ ಗಾಯಗೊಂಡಿರುವುದು ತಂಡದ ಚಿಂತೆ ಹೆಚ್ಚಿಸಿದೆ.
ದುಬೈನಲ್ಲಿ ಭಾನುವಾರ ನಡೆದ ಅಭ್ಯಾಸದ ವೇಳೆ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರಿಷಭ್ ಪಂತ್ ಅವರ ಮಂಡಿಗೆ ಚೆಂಡು ಬಲವಾಗಿ ಬಡಿದಿದೆ. ಅಪಘಾತದ ವೇಳೆ ದೊಡ್ಡ ಪೆಟ್ಟು ಬಿದ್ದಿದ್ದ ಮಂಡಿಗೆ ಮತ್ತೆ ಚೆಂಡು ಬಡಿದಿದೆ. ಪಂತ್ ಅಭ್ಯಾಸ ಮುಂದುವರಿಸಿದರೂ ನಂತರ ನೋವು ಕಾಣಿಸಿಕೊಂಡಿದೆ ಎಂದು ತಂಡದ ಮೂಲಗಳು ತಿಳಿಸಿವೆ.
2022ರಲ್ಲಿ ಪಂತ್ ಅಪಘಾತಕ್ಕೆ ಒಳಗಾಗಿದ್ದಾಗ ಮಂಡಿಗೆ ದೊಡ್ಡ ನೋವಾಗಿತ್ತು. ಆದರೆ ಇದೀಗ ಪಾಂಡ್ಯ ಎಸೆತದಲ್ಲಿ ಇದೇ ಜಾಗಕ್ಕೆ ಪೆಟ್ಟು ಬಿದ್ದಿದೆ. ಆದರೆ ಗಾಯದ ಪ್ರಮಾಣದ ಬಗ್ಗೆ ಆಡಳಿತ ಮಂಡಳಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಲಭ್ಯರಾಗುತ್ತಾರೋ ಇಲ್ಲವೋ ಎಂಬುದು ತಿಳಿದು ಬಂದಿಲ್ಲ.
ಫೆಬ್ರವರಿ 23ರಂದು ಪಾಕಿಸ್ತಾನ ವಿರುದ್ಧ ಭಾರತ ಹೈವೋಲ್ಟೇಜ್ ಪಂದ್ಯವಾಡಲಿದ್ದು, ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯ ಆಟಗಾರರು ಲಯ ಕಂಡುಕೊಳ್ಳಲು ಉತ್ತಮ ವೇದಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಪಂತ್ ಲಭ್ಯತೆ ತಿಳಿಯಬೇಕಾಗಿದೆ.


