ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ ನೇತೃತ್ವದ ಭಾರತದ ಸ್ಪಿನ್ ದಾಳಿ ನೆರವಿನಿಂದ ಭಾರತ ತಂಡ 44 ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ `ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.
ದುಬೈನಲ್ಲಿ ಭಾನುವಾರ ನಡೆದ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ನ್ಯೂಜಿಲೆಂಡ್ ತಂಡ 45.3 ಓವರ್ ಗಳಲ್ಲಿ 205 ರನ್ ಗೆ ಪತನಗೊಂಡಿತು.
ಈ ಗೆಲುವಿನೊಂದಿಗೆ ಭಾರತ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ 2ನೇ ಸ್ಥಾನ ಪಡೆದಿದ್ದು, ಮತ್ತೊಂದು ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ನ್ಯೂಜಿಲೆಂಡ್ ತಂಡದ ಪರ ಮಾಜಿ ನಾಯಕ ಕೇನ್ ವಿಲಿಯಮ್ಸನ್ 120 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ ಏಕಾಂಗಿಯಾಗಿ ಹೋರಾಟ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಲ್ ಯಂಗ್ (22), ನಾಯಕ ಮಿಚೆಲ್ ಸ್ಯಾಂಟ್ನರ್ (28), ಡ್ರೈಲ್ ಮಿಚೆಲ್ (17) ಮತ್ತು ಟಾಮ್ ಲಾಥಮ್ (14) ಸಾಧಾರಣ ಮೊತ್ತಕ್ಕೆ ಕುಸಿದಿದ್ದರಿಂದ ತಂಡ ಸೋಲಿನ ಹಾದಿ ಹಿಡಿಯಿತು.
ಭಾರತೀಯ ಸ್ಪಿನ್ನರ್ ಗಳು 9 ವಿಕೆಟ್ ಹಂಚಿಕೊಂಡರೆ, ವರುಣ್ ಚಕ್ರವರ್ತಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಮೊಹಮದ್ ಶಮಿ ಕೇವಲ 4 ಓವರ್ ಎಸೆದರೂ ಒಂದೂ ವಿಕೆಟ್ ಪಡೆಯಲಿಲ್ಲ. ಹಾರ್ದಿಕ್ ಪಾಂಡ್ಯ 1 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ 30 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. 300ನೇ ಪಂದ್ಯವಾಡಿದ ಕೊಹ್ಲಿ 11 ರನ್ ಗಳಿಸಿದ್ದಾಗ ಫಿಲಿಪ್ಸ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ 98 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 79 ರನ್ ಬಾರಿಸಿದ್ದೂ ಅಲ್ಲದೇ ಅಕ್ಸರ್ ಪಟೇಲ್ ಜೊತೆ ನಾಲ್ಕನೇ ವಿಕೆಟ್ ಗೆ 98 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಅಕ್ಸರ್ ಪಟೇಲ್ 61 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 42 ರನ್ ಗಳಿಸಿದರು.
ಕೆಎಲ್ ರಾಹುಲ್ (23) ಮತ್ತು ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 45 ರನ್ ಬಾರಿಸಿ ತಂಡದ ಮೊತ್ತವನ್ನು 250 ಗಡಿ ಸಮೀಪ ಕೊಂಡೊಯ್ದರು. ನ್ಯೂಜಿಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ಮ್ಯಾಟ್ ಹೆನ್ರಿ 42 ರನ್ ಗೆ 5 ವಿಕೆಟ್ ಕಬಳಿಸಿದರು.


