ಕ್ರಿಕೆಟ್ ಆಡುತ್ತಿದ್ದಾಗ 35 ವರ್ಷದ ಬ್ಯಾಟ್ಸ್ ಮನ್ ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಪುಣೆಯಲ್ಲಿ ಸಂಭವಿಸಿದೆ.
ಪುಣೆಯ ಗಾರ್ವರೆ ಮೈದಾನದಲ್ಲಿ ಗುರುವಾರ ಕ್ರಿಕೆಟ್ ಪಂದ್ಯ ಆಡುವಾಗ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಮ್ರಾನ್ ಪಟೇಲ್ ಕಾರ್ಡಿಯಕ್ ಅರೆಸ್ಟ್ ನಿಂದ ಮೃತಪಟ್ಟಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಇಮ್ರಾನ್ ಪಟೆಲ್ ಸ್ವಲ್ಪ ಹೊತ್ತು ಬ್ಯಾಟಿಂಗ್ ನಡೆಸಿದಾಗ ಎದೆನೋವು ಎಂದು ಹೇಳಿಕೊಂಡರು. ನಂತರ ಅಂಪೈರ್ ಬಳಿ ಬಂದು ಬ್ಯಾಟಿಂಗ್ ಮಾಡಲು ಆಗುತ್ತಿಲ್ಲ. ಆದ್ದರಿಂದ ಮೈದಾನ ತೊರೆಯುವುದಾಗಿ ಹೇಳಿದರು.
ಮೈದಾನದಿಂದ ಹೊರಗೆ ಹೋಗುತ್ತಿದ್ದಂತೆ ಎದೆನೋವು ತಾಳಲಾರದೇ ಕುಸಿದುಬಿದ್ದಿದ್ದಾರೆ. ಕೂಡಲೇ ಎಲ್ಲಾ ಆಟಗಾರರು ಧಾವಿಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ದಾರಿ ಮಧ್ಯೆದಲ್ಲೇ ಅಸುನೀಗಿದ್ದಾರೆ. ಪಂದ್ಯ ನೇರಪ್ರಸಾರ ಆಗುತ್ತಿದ್ದ ಕಾರಣ ಇಡೀ ಪ್ರಕರಣ ವೀಡಿಯೋದಲ್ಲಿ ಸೆರೆಯಾಗಿದೆ.
ಇಮ್ರಾನ್ ಪಟೇಲ್ ಆರೋಗ್ಯಕರವಾಗಿದ್ದು, ಉತ್ತಮ ಆಲ್ ರೌಂಡರ್ ಆಗಿದ್ದು, ಇಡೀ ಪಂದ್ಯದಲ್ಲಿ ಉತ್ಸಾಹದಿಂದ ಆಡುವ ಆಟಗಾರನಾಗಿದ್ದು. ಕಾರ್ಡಿಯಕ್ ಅರೆಸ್ಟ್ ಆಗಲು ಏನು ಕಾರಣ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.
ಇಮ್ರಾನ್ ಪಟೇಲ್ ಗೆ ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ. ಆರೋಗ್ಯವಂತನಾಗಿದ್ದ ಇಮ್ರಾನ್ ಹೃದಯಾಘಾತಕ್ಕೆ ಕಾರಣ ಏನು ಎಂಬುದು ನಿಗೂಢವಾಗಿದೆ. ಆರೋಗ್ಯವಂತ ವ್ಯಕ್ತಿ ಹೀಗೆ ದಿಢೀರನೆ ಸಾವಿಗೀಡಾಗಿದ್ದು ನಮಗೆಲ್ಲಾ ಆಘಾತ ನೀಡಿದೆ ಎಂದು ಸಹ ಆಟಗಾರರು ಹೇಳಿದ್ದಾರೆ.
ಇಮ್ರಾನ್ ಗೆ ಪತ್ನಿ ಹಾಗೂ ನಾಲ್ಕು ತಿಂಗಳ ಮಗು ಸೇರಿದಂತೆ ಮೂರು ಮಕ್ಕಳಿದ್ದು, ರಿಯಲ್ ಎಸ್ಟೇಟ್ ಉದ್ಯಮ ಹಾಗೂ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುವುದರಲ್ಲಿ ಸ್ಥಳೀಯವಾಗಿ ಜನಪ್ರಿಯರಾಗಿದ್ದರು. ಅಲ್ಲದೇ ಜ್ಯೂಸ್ ಅಂಗಡಿ ಕೂಡ ನಡೆಸುತ್ತಿದ್ದರು.