Wednesday, December 24, 2025
Google search engine
Homeಕ್ರೀಡೆಹಿರಿಯ ಆಟಗಾರರ ಮೇಲೆ ಗಂಭೀರ್ ಕೆಂಡ: ಡ್ರೆಸ್ಸಿಂಗ್ ರೂಮ್ ಘಟನೆ ಸೋರಿಕೆ

ಹಿರಿಯ ಆಟಗಾರರ ಮೇಲೆ ಗಂಭೀರ್ ಕೆಂಡ: ಡ್ರೆಸ್ಸಿಂಗ್ ರೂಮ್ ಘಟನೆ ಸೋರಿಕೆ

ಮೆಲ್ಬೋರ್ನ್: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹಿರಿಯ ಆಟಗಾರರ ಸತತ ವೈಫಲ್ಯಕ್ಕೆ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂಬ ವರದಿಗಳು ಹೇಳಿವೆ.

ನಾಲ್ಕನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ, ಡ್ರೆಸ್ಸಿಂಗ್ ರೂಮ್ನಲ್ಲಿ ಗೌತಮ್ ಗಂಭೀರ್ ಬಹಿರಂಗವಾಗಿಯೇ ಹಿರಿಯ ಆಟಗಾರರ ಮೇಲಿನ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.

ಹೌದು, ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮಲ್ಲಿ ನಡೆದ ಟೀಂ ಮೀಟಿಂಗ್ನಲ್ಲಿ ಗಂಭೀರ್ ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಹಿರಿಯ ಆಟಗಾರರನ್ನು ಉದ್ದೇಶಿಸಿ ಬಹಿರಂಗವಾಗಿಯೇ ಹೇಳಿರುವುದಾಗಿ ವರದಿಯಾಗಿದೆ.

ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಸಾಧನೆ ಕಳಪೆಯಾಗಿದ್ದು, ಇದರಿಂದಾಗಿ ಗಂಭೀರ್ ಮೇಲೆ ಒತ್ತಡ ಹೆಚ್ಚುತ್ತಿದೆ ಎಂಬ ಮಾತುಗಳಿಗೂ ಬರವಿಲ್ಲ.

ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ಅವಕಾಶ ಕಡಿಮೆ ಆಗುತ್ತಿದ್ದು, ಇದರಿಂದಾಗಿ ಗೌತಮ್ ಗಂಭೀರ್ ಚಿಂತಾಕ್ರಾಂತರಾಗಿದ್ದಾರೆ.

ಅಲ್ಲದೇ ಹಿರಿಯ ಆಟಗಾರರು ಸಾಮೂಹಿಕ ನಿರ್ಧಾರಗಳಿಗೆ ಬೆಲೆ ಕೊಡದೇ ತಮ್ಮದೇ ಆದ ದಾರಿಯಲ್ಲಿ ನಡೆಯುತ್ತಿರುವುದನ್ನು ಗೌತಮ್ ಗಂಭೀರ್ ಸಹಿಸುತ್ತಿಲ್ಲ ಎನ್ನಲಾಗಿದೆ.

ಮೆಲ್ಬರ್ನ್ ಟೆಸ್ಟ್ ಸೋಲಿನ ಬಳಿಕ, ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದ ಹಿರಿಯ ಆಟಗಾರರನ್ನು ಉದ್ದೇಶಿಸಿ ಗೌತಮ್ ಗಂಭೀರ್ “ಬಹುತ್ ಹೋ ಗಯಾ (ನನಗೆ ಸಾಕಾಗಿದೆ)” ಎಂದು ಗಂಭೀರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಕೆಲವು ಆಟಗಾರರು ಮೈದಾನದಲ್ಲಿ ನಡೆದುಕೊಂಡ ರೀತಿಗೂ, ಗಂಭೀರ್ ಅಸಮಾಧಾನ ಹೊರಹಾಕಿದರು ಎಂದು ಮಾಧ್ಯಮ ವರದಿಗಳು ಹೇಳಿವೆ.

ಡ್ರೆಸ್ಸಿಂಗ್ ರೂಮಲ್ಲಿ ನಡೆದ ಸಭೆಯಲ್ಲಿ “ನೀವು ನಿಮ್ಮದೇ ಆದ ಮಾರ್ಗದಲ್ಲಿ ಆಟವಾಡಲು ನಾನು ಆರು ತಿಂಗಳ ಕಾಲಾವಕಾಶ ನೀಡಿದ್ದೇನೆ. ಆದರೆ ಇನ್ನು ಮುಂದೆ ತಂಡಕ್ಕೆ ಬೇಕಾದ ಹಾಗೆ ನೀವಾಡಬೇಕು.

ನಿಯಮ ಉಲ್ಲಂಘಿಸುವ ಯಾವುದೇ ಆಟಗಾರನಿಗೆ ತಂಡದಿಂದ ನಿರ್ಗಮನದ ಬಾಗಿಲು ತೋರಿಸಲಾಗುವುದು ಎಂದು ಗಂಭೀರ್ ಖಡಕ್ ಆಗಿ ಹೇಳಿರುವುದಾಗಿ ವರದಿಯಾಗಿದೆ.

ನಿರ್ದಿಷ್ಟ ಸನ್ನಿವೇಶ ಅಥವಾ ಪಂದ್ಯಕ್ಕೆ ಗಂಭೀರ್ ರೂಪಿಸುವ ತಂತ್ರಗಳಿಗೂ, ಮೈದಾನದಲ್ಲಿ ಆಟಗಾರರ ವರ್ತನೆಗೂ ತಾಳೆಯಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ.

ಇದು ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರತ್ತ ಇಶಾರೆ ಮಾಡುತ್ತಿದ್ದು, ತುರ್ತಾಗಿ ಈ ಪರಿಸ್ಥಿತಿಯನ್ನು ಬದಲಿಸಲು ಗಂಭೀರ್ ಮುಂದಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಿನಲ್ಲಿ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರ ನಡುವೆ ಕಂದಕ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ತಂಡದ ಒಳಿತಿಗಾಗಿ ಸಾಮೂಹಿಕ ನಿರ್ಧಾರದ ಅಡಿಯಲ್ಲಿ ಎಲ್ಲರೂ ನಡೆಯಬೇಕಿರುವುದು ಭಾರತ ತಂಡದ ಪ್ರದರ್ಶನದ ದೃಷ್ಟಿಯಿಂದ ಇಂದಿನ ತುರ್ತು ಅಗತ್ಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments