ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮ ಹೊರಗುಳಿಯಲಿದ್ದು, ಶುಭಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಫಾರ್ಮ್ ನಲ್ಲಿ ಇಲ್ಲದ ರೋಹಿತ್ ಶರ್ಮ ಕೊನೆಯ ಟೆಸ್ಟ್ ಪಂದ್ಯ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಮೂಲಕ ತಂಡದ ನಾಯಕನನ್ನೇ ಮಹತ್ವದ ಪಂದ್ಯದಿಂದ ಹೊರಗಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡ ಪ್ರಸ್ತುತ ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರಿಂದ ಹಿನ್ನಡೆ ಅನುಭವಿಸಿದೆ. ಭಾರತ ಸರಣಿಯಲ್ಲಿ ಗೆಲುವು ಸಾಧಿಸುವುದು ಅಸಾಧ್ಯವಾದರೂ ಸಮಬಲ ಸಾಧಿಸಬೇಕಾದರೆ ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ ಅವಕಾಶ ಇದ್ದರೂ ಹಿರಿಯ ಆಟಗಾರರ ವೈಫಲ್ಯದಿಂದ ಭಾರತ ನಾಟಕೀಯವಾಗಿ ಕುಸಿತ ಕಂಡು ಸೋಲುಂಡಿತ್ತು. ಇದರಿಂದ ಭಾರತ ಸರಣಿ ಗೆಲುವಿನ ಉತ್ತಮ ಅವಕಾಶವನ್ನು ಕೈಚೆಲ್ಲಿತ್ತು.
ರೋಹಿತ್ ಶರ್ಮ ತವರಿನಲ್ಲಿ ನಡೆದ ಸರಣಿ ಸೇರಿದಂತೆ ಕಳೆದ 15 ಇನಿಂಗ್ಸ್ ಗಳಲ್ಲಿ 10.45ರ ಸರಾಸರಿಯಲ್ಲಿ 165 ರನ್ ಗಳಿಸಿದ್ದು, ಒಂದು ಬಾರಿ ಅರ್ಧಶತಕ ಗಳಿಸಿದ್ದು ಬಿಟ್ಟರೆ ಅವರಿಂದ ದೊಡ್ಡ ಮೊತ್ತದ ಕಾಣಿಕೆ ಬಂದಿಲ್ಲ.
ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮ ಎರಡನೇ ಟೆಸ್ಟ್ ಪಂದ್ಯದಿಂದ ಸ್ವತಃ ತಾವೇ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಕೊನೆಯ ಪಂದ್ಯದಲ್ಲಿ ಹೊರಗುಳಿದರೆ ಜಸ್ ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದು, ಶುಭಮನ್ ಗಿಲ್ ಆರಂಭಿಕನಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ಮತ್ತೊಂದೆಡೆ ರೋಹಿತ್ ಶರ್ಮ ಈ ಸರಣಿ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಡಿಸಿದ್ದು, ಕೊನೆಯ ಪಂದ್ಯವಾದರೆ ಇದು ಅವರಿಗೆ ಬೀಳ್ಕೊಡುಗೆ ಪಂದ್ಯವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.