ಮಧ್ಯಮ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕಗಳ ನೆರವಿನಿಂದ ಡಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸುಲಭ ಗೆಲುವು ದಾಖಲಿಸಿದೆ.
ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.4 ಓವರ್ ಗಳಲ್ಲಿ 163 ರನ್ ಪೇರಿಸಿತು. ಸುಲಭ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ಓವರ್ ಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಆರ್ ಸಿಬಿ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಮತ್ತು ಜಾಕ್ ಫ್ರೇಜರ್ ಮೊದಲ ವಿಕೆಟ್ ಗೆ 81 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಫ್ರೇಜರ್ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 38 ರನ್ ಬಾರಿಸಿದರೆ, ಪ್ಲೆಸಿಸ್ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 50 ರನ್ ನೊಂದಿಗೆ ಅರ್ಧಶತಕ ಬಾರಿಸಿದರು.
ಕೆಎಲ್ ರಾಹುಲ್ 5 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 15 ರನ್ ಗಳಿಸಿದ್ದಾಗ ಔಟಾಗಿ ನಿರಾಸೆ ಮೂಡಿಸಿದರು. ನಂತರ ಅಭಿಷೇಕ್ ಪೊರಲ್ 18 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಸೇರಿದಂತೆ 34 ರನ್ ಗಳಿಸಿದರೆ, ಟ್ರಿಸ್ಟನ್ ಸ್ಟಬ್ಸ್ 14 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 21 ರನ್ ಬಾರಿಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಕಲೆ ಹಾಕುತ್ತಾ ಬಂದಿರುವ ಸನ್ ರೈಸರ್ಸ್ ಬ್ಯಾಟ್ ಮಾಡಿ ಇದೇ ಮೊದಲ ಬಾರಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಮಧ್ಯಮ ವೇಗಿ ಮಿಚೆಲ್ ಸ್ಟಾರ್ಕ್ 35 ರನ್ ನೀಡಿ 5 ವಿಕೆಟ್ ಪಡೆದು ಹೈದರಾಬಾದ್ ಗೆ ಕಡಿವಾಣ ಹಾಕಿದರು.
ಒಂದು ಹಂತದಲ್ಲಿ ಸನ್ ರೈಸರ್ಸ್ ಹೈದರಾಬಾದ್ 37 ರನ್ ಗೆ 4 ವಿಕೆಟ್ ಕಳೆದುಕೊಂಡು ತತ್ತರಿಸಿತು. ಮಧ್ಯಮ ಕ್ರಮಾಂಕದಲ್ಲಿ ಅನಿಕತೇತ್ ವರ್ಮಾ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 74 ರನ್ ಬಾರಿಸಿ ತಂಡವನ್ನು ಆಧರಿಸಿದರು.


