ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕ ಸಿಡಿಸಿದ ರಿಷಭ್ ಪಂತ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ 7ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಲೀಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಈ ಸಾಧನೆ ಮಾಡಿದ ವಿಶ್ವದ 2ನೇ ಹಾಗೂ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಭಾರತ 5 ಶತಕಗಳನ್ನು ಸಿಡಿಸಿದರೂ 5 ವಿಕೆಟ್ ಗಳಿಂದ ಇಂಗ್ಲೆಂಡ್ ವಿರುದ್ಧ ಸೋಲುಂಡಿತ್ತು. ಈ ಮೂಲಕ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸುವಂತಾಯಿತು.
27 ವರ್ಷದ ಪಂತ್ ಮೊದಲ ಇನಿಂಗ್ಸ್ ನಲ್ಲಿ 134 ಮತ್ತು ಎರಡನೇ ಇನಿಂಗ್ಸ್ ನಲ್ಲಿ 118 ರನ್ ಗಳಿಸಿದ್ದರು. ಈ ಸಾಧನೆ ಮೂಲಕ ಪಂತ್ 1 ಸ್ಥಾನ ಜಿಗಿದು 7ನೇ ಸ್ಥಾನಕ್ಕೆ ಲಗ್ಗೆ ಹಾಕಿದರು.
ಟೆಸ್ಟ್ ತಂಡದ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಶುಭಮನ್ ಗಿಲ್ 5 ಸ್ಥಾನ ಮೇಲೇರಿ 20ನೇ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಕೆಎಲ್ ರಾಹುಲ್ 10 ಸ್ಥಾನ ಜಿಗಿದು 38ನೇ ಸ್ಥಾನ ಪಡೆದರೆ, ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ ಯಶಸ್ವಿ ಜೈಸ್ವಾಲ್ 4ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಪಡೆದರೂ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ ಜಸ್ ಪ್ರೀತ್ ಬುಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜಡೇಜಾ ಆಲ್ ರೌಂಡರ್ ವಿಭಾಗದಲ್ಲಿ ಅಗ್ರ 10ರಿಂದ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಬೆನ್ ಡುಕೆಟ್ ಬ್ಯಾಟಿಂಗ್ ವಿಭಾಗದಲ್ಲಿ 5 ಸ್ಥಾನ ಮೇಲೇರಿ 8ನೇ ಸ್ಥಾನ ಗಳಿಸಿದರು.ಓಲಿ ಪೊಪೆ 3 ಸ್ಥಾನ ಜಿಗಿದು 19ನೇ ಸ್ಥಾನ ಹಾಗೂ ಜೆಮ್ಮಿ ಸ್ಮಿತ್ 8 ಸ್ಥಾನ ಮೇಲೇರಿ 27ನೇ ಸ್ಥಾನ ಪಡೆದರು.


