ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಡ್ ಹೆಡ್ ಸಿಡಿಸಿದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮುನ್ನಡೆ ಸಾಧಿಸಿದರೆ, ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿರುವ ಭಾರತ ಸೋಲಿನ ಭೀತಿಗೆ ಸಿಲುಕಿದೆ.
ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 1 ವಿಕೆಟ್ ಗೆ 86 ರನ್ ಗಳಿಂದ ಆಟ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಚಹಾ ವಿರಾಮದ ಬೆನ್ನಲ್ಲೇ ಮೊದಲ ಇನಿಂಗ್ಸ್ ನಲ್ಲಿ 87.3 ಓವರ್ ಗಳಲ್ಲಿ 337 ರನ್ ಗೆ ಪತನಗೊಂಡಿತು. ಇದರೊಂದಿಗೆ 157 ರನ್ ಮುನ್ನಡೆ ಪಡೆದಿದೆ.
ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ 128 ರನ್ ಗೆ 5 ವಿಕೆಟ್ ಕಳೆದುಕೊಂಡಿದೆ. ಭಾರತ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗಬೇಕಾದರೆ ಇನ್ನೂ 29 ರನ್ ಗಳಿಸಬೇಕಾಗಿದೆ.
28 ರನ್ ಗಳಿಸಿರುವ ರಿಷಭ್ ಪಂತ್ ಮತ್ತು 15 ರನ್ ಗಳಿಸಿರುವ ನಿತೀಶ್ ರೆಡ್ಡಿ ಕ್ರೀಸ್ ನಲ್ಲಿದ್ದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಯಶಸ್ವಿ ಜೈಸ್ವಾಲ್ (24), ಶುಭಮನ್ ಗಿಲ್ (28), ಕೆಎಲ್ ರಾಹುಲ್ (7), ವಿರಾಟ್ ಕೊಹ್ಲಿ (11), ನಾಯಕ ರೋಹಿತ್ ಶರ್ಮ (6) ಪೆವಿಲಿಯನ್ ಸೇರಿದ್ದಾರೆ.
ಉತ್ತಮ ಆರಂಭ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಮಾರ್ಕ್ ಲಬುಶೇನ್ 65 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಲುಬುಶೇನ್ 126 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 64 ರನ್ ಗಳಿಸಿ ಔಟಾದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ 141 ಎಸೆತಗಳಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 140 ರನ್ ಸಿಡಿಸಿದರು. ಅಲ್ಲದೇ 6ನೇ ವಿಕೆಟ್ ಗೆ ಅಲೆಕ್ಸ್ ಕ್ಯಾರಿ ಜೊತೆ 76 ರನ್ ಜೊತೆಯಾಟ ನಿಭಾಯಿಸಿದರು. ಇದರಲ್ಲಿ ಅಲೆಕ್ಸ್ ಗಳಿಸಿದ್ದು ಕೇವಲ 15 ರನ್ ಅಂದರೆ ಹೆಡ್ ಆರ್ಭಟ ಹೇಗಿತ್ತು ಎಂಬು ಊಹಿಸಬಹುದು.
ಭಾರತದ ಪರ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ ತಲಾ 4 ವಿಕೆಟ್ ಉರುಳಿಸಿದರೆ, ಅಶ್ವಿನ್ ಮತ್ತು ನಿತೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದರು.