ಕೆಎಲ್ ರಾಹುಲ್ ಶತಕದ ಹೊರತಾಗಿಯೂ ಕೊನೆಯ ಹಂತದಲ್ಲಿ ನಾಟಕೀಯ ಪತನಗೊಂಡ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮುನ್ನಡೆ ಸಾಧಿಸುವ ಅವಕಾಶ ಕೈ ತಪ್ಪಿದರೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸಮಬಲ ಸಾಧಿಸಿತು.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಶನಿವಾರದ ಭಾರತ ಮೊದಲ ಇನಿಂಗ್ಸ್ ನಲ್ಲಿ 387 ರನ್ ಗೆ ಆಲೌಟಾದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 387 ರನ್ ಗಳಿಸಿದ್ದು, ದಿನದಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 2 ರನ್ ಗಳಿಸಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 9ನೇ ಬಾರಿ ಮೊದಲ ಇನಿಂಗ್ಸ್ ನಲ್ಲಿ ಎರಡನೇ ಬಾರಿ ಬ್ಯಾಟ್ ಮಾಡಿದ ತಂಡ ಸಮಬಲ ಸಾಧಿಸಿದೆ. ಭಾರತ ಮೂರನೇ ಬಾರಿ ಸಮಬಲ ಸಾಧಿಸಿತು. ಆದರೆ ಮುನ್ನಡೆ ಪಡೆಯುವ ಅವಕಾಶ ಕಳೆದುಕೊಂಡಿತು.
ಭಾರತ ತಂಡ ಒಂದು ಹಂತದಲ್ಲಿ ಕೆಎಲ್ ರಾಹುಲ್ ಶತಕ ಹಾಗೂ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ವೈಯಕ್ತಿಕ ಅರ್ಧಶತಕ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ 11 ರನ್ ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಅನುಭವಿಸಿದ್ದರಿಂದ ಮುನ್ನಡೆಯ ಹೊಸ್ತಿಲಲ್ಲಿ ಎಡವಿದರೂ ಸಮಬಲದ ಗೌರವದೊಂದಿಗೆ ಮೊದಲ ಇನಿಂಗ್ಸ್ ಗೆ ತೆರೆ ಎಳೆಬಿದ್ದಿತು.
ಕೆಎಲ್ ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ ಬರೋಬ್ಬರಿ 100 ರನ್ ಬಾರಿಸಿ ಔಟಾದರು. ಇದಕ್ಕೂ ಮುನ್ನ 4ನೇ ವಿಕೆಟ್ ಗೆ ರಿಷಭ್ ಪಂತ್ ಜೊತೆ 141 ರನ್ ಜೊತೆಯಾಟ ನಿಭಾಯಿಸಿದರು. ಪಂತ್ 112 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 4 ರನ್ ಗಳಿಸಿ ನಿರ್ಗಮಿಸಿದರು.
ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರವೀಂದ್ರ ಜಡೇಜಾ 131 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 72 ರನ್ ಗಳಿಸಿದರು. ನಿತಿಶ್ ಕುಮಾರ್ ರೆಡ್ಡಿ (30) ಮತ್ತು ವಾಷಿಂಗ್ಟನ್ ಸುಂದರ್ (23) ಉಪಯುಕ್ತ ಕಾಣಿಕೆ ನೀಡಿದರು.ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3, ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ತಲಾ 2 ವಿಕೆಟ್ ಪಡೆದರು.


