ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದ್ದು, ಗಾಯದ ಕಾರಣ ಹೊರಗುಳಿದಿದ್ದ ಮಧ್ಯಮ ವೇಗಿ ಮೊಹಮದ್ ಶಮಿ ಮರಳಿದ್ದಾರೆ.
ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.
2023ರ ವಿಶ್ವಕಪ್ ನಂತರ ಗಾಯದ ಕಾರಣ ಭಾರತ ತಂಡಕ್ಕೆ ಮರಳಲು ಯತ್ನಿಸುತ್ತಿರುವ ಮೊಹಮದ್ ಶಮಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಡೆಗಣಿಸಲಾಗಿತ್ತು. ಆದರೆ ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಶಮಿ ಆಯ್ಕೆದಾರರ ಗಮನ ಸೆಳೆಯಲು ಯಶಸ್ವಿಯಾಗಿದ್ದರು.
ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ ಆರಂಭಗೊಳ್ಳಲಿದ್ದು, ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಧ್ರುವ ಜುರೆಲ್ ಅವರನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ವಿಶೇಷ ಅಂದರೆ ಆಲ್ ರೌಂಡರ್ ಶಿವಂ ದುಬೆ ಅವರನ್ನು ಕೈಬಿಟ್ಟು, ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪರಿಗಣಿಸಲಾಗಿದೆ. ವಾಷಿಂಗ್ಟನ್ ಸುಂದರ್ ಕೂಡ ಸ್ಥಾನ ಉಳಿಸಿಕೊಂಡಿದ್ದಾರೆ.
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಮೊಹಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಶ್ನೋಯಿ, ವಾಷಿಂಗ್ಟನ್ ಸುಂದರ್, ಧ್ರುವ ಜುರೆಲ್ (ವಿಕೆಟ್ ಕೀಪರ್).