ಐಪಿಎಲ್ ಟಿ-20 ಟೂರ್ನಿಯ 19ನೇ ಆವೃತ್ತಿ ಮಾರ್ಚ್ 26ರಿಂದ ಮೇ 31ರವರೆಗೆ ನಡೆಯಲಿದ್ದು, ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ.
ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್ ಹರಾಜು ವೇಳೆ ಫ್ರಾಂಚೈಸಿ ಮೂಲಗಳು ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಬಿಸಿಸಿಐ ಅಧಿಕೃತವಾಗಿ ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ ಮಾಡಲಿದೆ.
ಫೆಬ್ರವರಿ 8ರಿಂದ ಮಾರ್ಚ್ 8ರವರೆಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಮೂರು ವಾರಗಳ ಬಿಡುವಿನ ನಂತರ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.
ಐಪಿಎಲ್ ಟೂರ್ನಿ ಸತತ ಎರಡನೇ ಬಾರಿ ಪಾಕಿಸ್ತಾನ ಕ್ರಿಕೆಟ್ ಲೀಗ್ ವೇಳೆಯೇ ನಡೆಯಲಿದೆ ಪಿಎಸ್ ಎಲ್ ಟೂರ್ನಿ ಮಾರ್ಚ್ 26ರಿಂದ ಮೇ 3ರವರೆಗೆ ನಡೆಯಲಿದ್ದು, ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ನಿಗದಿಪಡಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದು ಹೇಳಲಾಗಿದ್ದು, ರಾಜ್ಯ ಸರ್ಕಾರ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಷರತ್ತು ವಿಧಿಸಿದೆ ಎಂದು ಹೇಳಲಾಗಿದೆ.
ಅಬುಧಾಬಿಯಲ್ಲಿ ಮಂಗಳವಾರ ನಡೆದ ಐಪಿಎಲ್ ಹರಾಜಿನಲ್ಲಿ 369 ಆಟಗಾರರನ್ನು ಘೋಷಿಸಲಾಗಿತ್ತು. 77 ಸ್ಥಾನಗಳಿಗೆ 10 ಫ್ರಾಂಚೈಸಿಗಳು ಹೋರಾಟ ನಡೆಸಿದ್ದು, ಕೆಮರೂನ್ ಗ್ರೀನ್ 25.20 ಕೋಟಿಗೆ ಹರಾಜು ಆಗಿ ದಾಖಲೆ ಬರೆದರು.


