ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಸಿಡಿಸಿದ ಅಜೇಯ ಶತಕಗಳ ನೆರವಿನಿಂದ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಡ್ರಾ ಸಾಧಿಸಿದೆ.
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿದ್ದ 4ನೇ ಟೆಸ್ಟ್ ಪಂದ್ಯದದಲ್ಲಿ 311 ರನ್ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಅಂತಿಮ ದಿನವಾದ ಭಾನುವಾರ 2 ವಿಕೆಟ್ ಗೆ 174 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ಪಂದ್ಯ ಡ್ರಾ ಮಾಡಿಕೊಳ್ಳಬೇಕಾದರೆ ಇಡೀ ದಿನ ವಿಕೆಟ್ ಉಳಿಸಿಕೊಳ್ಳಬೇಕಾದ ಬೆಟ್ಟದಂತಹ ಸವಾಲನ್ನು ಭಾರತದ ಆಲ್ ರೌಂಡರ್ ಗಳು ಸಮರ್ಥವಾಗಿ ನಿಭಾಯಿಸಿ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಭಾರತ ಮೊದಲ ಇನಿಂಗ್ಸ್ ನಲ್ಲಿ 358 ರನ್ ಗಳಿಸಿದರೆ ಇಂಗ್ಲೆಂಡ್ 669 ರನ್ ಬಾರಿಸಿತ್ತು. ಭಾರತ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 425 ರನ್ ಗಳಿಸಿತು. ಇದರೊಂದಿಗೆ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ್ದು, ಭಾರತ ಅಂತಿಮ ಟೆಸ್ಟ್ ಗೆದ್ದರೆ ಸರಣಿ ಸಮ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ 5ನೇ ಹಾಗೂ ಅಂತಿಮ ಪಂದ್ಯ ಕುತೂಹಲ ಹಿಮ್ಮಡಿಸಿದೆ.
ನಿನ್ನೆ 97 ರನ್ ಗಳಿಸಿದ್ದ ಕೆಎಲ್ ರಾಹುಲ್ ಮತ್ತು 78 ರನ್ ಗಳಿಸಿದ್ದ ಶುಭಮನ್ ಗಿಲ್ ಜೋಡಿ ದಿನದಾಟ ಆರಂಭವಾದ ಕೆಲವೇ ಸಮಯದಲ್ಲಿ ಬೇರ್ಪಟ್ಟಿತು. ರಾಹುಲ್ 230 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ ನಿನ್ನೆಯ ಮೊತ್ತಕ್ಕೆ 3 ರನ್ ಸೇರಿಸಿ 90 ರನ್ ಗೆ ಔಟಾದರು. ಈ ಮೂಲಕ 10 ರನ್ ಗಳಿಂದ ಶತಕ ವಂಚಿತರಾದರು. ಗಿಲ್ 238 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 103 ರನ್ ಬಾರಿಸಿ ಔಟಾದರು. ಈ ಮೂಲಕ ಟೆಸ್ಟ್ ಸರಣಿಯಲ್ಲಿ 4ನೇ ಶತಕ ಬಾರಿಸಿದರು.
ಈ ಹಂತದಲ್ಲಿ ಭಾರತ ಮೊದಲ ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಬೇಕಾದರೆ 90 ರನ್ ಗಳಿಸಬೇಕಾಗಿತ್ತು. ಆದರೆ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮುರಿಯದ 4ನೇ ವಿಕೆಟ್ ಗೆ 203 ರನ್ ಜೊತೆಯಾಟದಿಂದ ಪಂದ್ಯದ ದಿಕ್ಕನ್ನೇ ಬದಲಿಸಿದ್ದೂ ಅಲ್ಲದೇ ತಂಡದ ಸೋಲು ತಪ್ಪಿಸಿದರು.
ಜಡೇಜಾ 185 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 107 ರನ್ ಬಾರಿಸಿ ಶತಕ ಪೂರೈಸಿದ ಸಂಭ್ರಮ ಆಚರಿಸಿದರೆ, ವಾಷಿಂಗ್ಟನ್ ಸುಂದರ್ 206 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಚೊಚ್ಚಲ ಶತಕ ಪೂರೈಸಿದರು.
ಜಡೇಜಾ ಮತ್ತು ಸುಂದರ್ 90ರ ಗಡಿಯಲ್ಲಿ ಇದ್ದಾಗ ಇಂಗ್ಲೆಂಡ್ ಆಟಗಾರರು ಡ್ರಾ ಪ್ರಸ್ತಾಪ ಮುಂದಿಟ್ಟರೆ, ಜಡೇಜಾ ಆಟ ಮುಂದುವರಿಸುವುದಾಗಿ ಪಟ್ಟು ಹಿಡಿದಾಗ ಇಂಗ್ಲೆಂಡ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದರು.
ನಿಗದಿತ ಸಮಯ ಮುಗಿದ ಕಾರಣ ಡ್ರಾ ಪ್ರಸ್ತಾಪ ನಿರಾಕರಿಸಿದ್ದಕ್ಕೆ ನಾಯಕ ಬೆನ್ ಸ್ಟ್ರೋಕ್ ಅಸಮಾಧಾನಗೊಂಡರು. ಆದರೆ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಶತಕ ಪೂರೈಸುವ ಭರವಸೆ ಮೂಡಿಸಿದ್ದರು. ನಂತರ ಸಿಡಿಲಬ್ಬರದ ಆಟವಾಡಿ ಶತಕ ಪೂರೈಸಿದರು. ಇಬ್ಬರೂ ಶತಕ ಪೂರೈಸುತ್ತಿದ್ದಂತೆ ಭಾರತ ತಂಡ ಡಿಕ್ಲೇರ್ ಘೋಷಿಸಿತು.


