ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದು ಕಪಿಲ್ ದೇವ್ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ.
ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಆಸ್ಟ್ರೇಲಿಯಾ ತಂಡ 407 ರನ್ ಗೆ 7 ವಿಕೆಟ್ ಕಳೆದುಕೊಂಡಿತು. ಬುಮ್ರಾ 72 ರನ್ ನೀಡಿ 5 ವಿಕೆಟ್ ಪಡೆದು ಏಕಾಂಗಿ ಹೋರಾಟದಿಂದ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡಿತು.
ಟ್ರಾವಿಡ್ ಹೆಡ್ ಮತ್ತು ಸ್ಟೀವನ್ ಸ್ಮಿತ್ ಶತಕಗಳ ನೆರವಿನಿಂದ ಒಂದು ಹಂತದಲ್ಲಿ 3 ವಿಕೆಟ್ ಗೆ 313 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ ನಾಟಕೀಯ ಕುಸಿತ ಕಂಡಿತು. ಹೆಡ್ ಮತ್ತು ಸ್ಮಿತ್ 4ನೇ ವಿಕೆಟ್ ಗೆ 231 ರನ್ ಜೊತೆಯಾಟ ನಿಭಾಯಿಸಿದರು. ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಅಪಾಯಕಾರಿಯಾಗಿದ್ದ ಈ ಜೋಡಿ ಬೇರ್ಪಡಿಸಿದ್ದೂ ಅಲ್ಲದೇ 5 ವಿಕೆಟ್ ಪಡೆದು ಮಿಂಚಿದರು.
ಬುಮ್ರಾ 5 ವಿಕೆಟ್ ಪಡೆಯುವ ಮೂಲಕ ಏಷ್ಯಾದ ಹೊರಗೆ 10ನೇ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಭಾರತದ ಬೌಲಿಂಗ್ ದಂತಕತೆ ಕಪಿಲ್ ದೇವ್ 9 ಬಾರಿ ಮಾಡಿದ್ದ ಸಾಧನೆಯನ್ನು ಹಿಂದಿಕ್ಕಿದರು.
ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ 12ನೇ ಬಾರಿ ಇನಿಂಗ್ಸ್ ನಲ್ಲಿ 5ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅಲ್ಲದೇ ಸೇನಾ (SENA- South Africa, England, New Zealand and Australia) ನೆಲದಲ್ಲಿ 8ನೇ ಬಾರಿ ಈ ಸಾಧನೆ ಮಾಡಿದ್ದು, ಕಪಿಲ್ ದೇವ್ 7 ಬಾರಿ 5 ವಿಕೆಟ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಟ್ರಾವಿಸ್ ಈ ಪಂದ್ಯದಲ್ಲೂ ಶತಕ ಸಿಡಿಸಿ ಗಮನ ಸೆಳೆದರು. ಟ್ರಾವಿಡ್ ಹೆಡ್ 160 ಎಸೆತಗಳಲ್ಲಿ 18 ಬೌಂಡರಿ ಒಳಗೊಂಡ 152 ರನ್ ಬಾರಿಸಿ ಔಟಾದರು.
ಸ್ಟೀವನ್ ಸ್ಮಿತ್ 500 ದಿನಗಳ ನಂತರ ಶತಕ ದಾಖಲಿಸಿ ಶಕತದ ಬರ ನೀಗಿಸಿಕೊಂಡಿದ್ದಾರೆ. ಸ್ಟಿವನ್ ಸ್ಮಿತ್ ಇದು 33ನೇ ಟೆಸ್ಟ್ ಶತಕವಾಗಿದೆ. ಅಲ್ಲದೇ ಭಾರತ ವಿರುದ್ಧವೇ ದಾಖಲಿಸಿದ 10ನೇ ಶತಕವಾಗಿದೆ. ಆದರೆ 190 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 101 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.