ಮುಂಬೈ: ಐಪಿಎಲ್ ಆರಂಭಕ್ಕೂ ಮುನ್ನವೇ ಬಹುತೇಕ ತಂಡಗಳು ಆಟಗಾರರಿಗೆ ಗಾಯದ ಸಮಸ್ಯೆಯಿಂದ ಬಳಲುವಂತಾಗಿದೆ. ಕೋಟಿ ಕೊಟ್ಟ ಆಟಗಾರರು ಟೂರ್ನಿ ಆರಂಭಕ್ಕೆ ಮುನ್ನ ಗಾಯಾಳು ಪಟ್ಟಿ ಸೇರಿದ್ದು ತಂಡಗಳು ಪರ್ಯಾಯ ಆಯ್ಕೆಗೆ ಮುಂದಾಗುವಂತೆ ಮಾಡಿದೆ.
ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಲಿಜಾದ್ ವಿಲಿಯಮ್ಸ್ ಮೊಣಕಾಲಿನ ಗಾಯದಿಂದಾಗಿ 2025ರ ಐಪಿಎಲ್ನಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಮುಂಬೈ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ಸೇರಿಸಿಕೊಂಡಿದೆ.
ಬಾಷ್ ದಕ್ಷಿಣ ಆಫ್ರಿಕಾ ಪರ ಒಂದು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ ಟಿ20 ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಟೀಮ್ ಇಂಡಿಯಾ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್ 2025ರ ಸೀಸನ್ ಆರಂಭಕ್ಕೂ ಮುನ್ನ ಗಾಯಗೊಂಡಿದ್ದಾರೆ. ಪರಿಣಾಮ ಅವರು ಐಪಿಎಲ್ 2025 ರಿಂದ ಹೊರಗುಳಿದಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉಮ್ರಾನ್ ಅವರನ್ನು ಹಾಲಿ ಚಾಂಪಿಯನ್ ಕೆಕೆಆರ್ 75 ಲಕ್ಷ ರೂ.ಗೆ ಖರೀದಿಸಿತು. ಈಗ ಅವರ ಬದಲಿಗೆ ಚೇತನ್ ಸಕಾರಿಯಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು 19 ಐಪಿಎಲ್ ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.
ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಗಜನ್ಫರ್ ಕೂಡ ಬೆನ್ನುನೋವಿನಿಂದಾಗಿ ಐಪಿಎಲ್ 2025 ರಿಂದ ಹೊರ ನಡೆದಿದ್ದಾರೆ. ಅವರ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಮುಜೀಬ್-ಉರ್-ರೆಹಮಾನ್ ಅವರನ್ನು ಬರ ಮಾಡಿಕೊಂಡಿದೆ.
ಮುಜೀಬ್ 19 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 19 ವಿಕೆಟ್ಗಳಿವೆ. ಅವರನ್ನು ಮುಂಬೈ 2 ಕೋಟಿ ರೂ.ಗೆ ಖರೀದಿಸಿದೆ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಬ್ರೈಡನ್ ಕಾರ್ಸ್ ಕೂಡ ಗಾಯಗೊಂಡ ಕಾರಣ ಐಪಿಎಲ್ 2025ರಿಂದ ಹೊರಗುಳಿದಿದ್ದಾರೆ.
ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಅವರ ಬದಲಿಯಾಗಿ ವಿಯಾನ್ ಮುಲ್ಡರ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಯಾನ್ ಮುಲ್ಡರ್ 18 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಹೊರತುಪಡಿಸಿ, 11 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಟಲ್ಲಿ 60 ವಿಕೆಟ್ಗಳನ್ನು ಪಡೆದಿದ್ದು, 970 ರನ್ಗಳನ್ನು ಗಳಿಸಿದ್ದಾರೆ.
ಇಂಗ್ಲೆಂಡ್ ಅನುಭವಿ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡ ಐಪಿಎಲ್ 2025 ರಲ್ಲಿ ಆಡುತ್ತಿಲ್ಲ. ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಸ್ವತಃ ಐಪಿಎಲ್ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 6.25 ಕೋಟಿ ರೂ.ಗೆ ಖರೀದಿಸಿದೆ. ಬ್ರೂಕ್ ಸತತ ಎರಡನೇ ಬಾರಿಗೆ ಐಪಿಎಲ್ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಈ ಕಾರಣದಿಂದಾಗಿ ಬಿಸಿಸಿಐ ಅವರನ್ನು ಐಪಿಎಲ್ನಿಂದ 2 ವರ್ಷಗಳ ಕಾಲ ನಿಷೇಧಿಸಿದೆ. ಪ್ರಸ್ತುತ ಅವರ ಬದಲಿ ಆಟಗಾರನನ್ನು ಡೆಲ್ಲಿ ಘೋಷಿಸಲಾಗಿಲ್ಲ.


