ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇದೇ ಮೊದಲ ಬಾರಿ ಉಪನಾಯಕ ಇಲ್ಲದ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಮೊದಲ ಟೆಸ್ಟ್ ಪಂದ್ಯಕ್ಕೆ ಸೋಮವಾರ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಭಾನುವಾರದಿಂದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
ಬಿಸಿಸಿಐ 20 ತಿಂಗಳ ನಂತರ ಪ್ರಕಟಿಸಿದ ಪೂರ್ಣ ಪ್ರಮಾಣದ ತಂಡದಲ್ಲಿ ಕರ್ನಾಟಕ ಕೆಎಲ್ ರಾಹುಲ್ ಸೇರಿದಂತೆ ಹಲವು ಹಿರಿಯ ಆಟಗಾರರು ಮರಳಿದ್ದಾರೆ. ಅದೇ ರೀತಿಯ ಕೆಲವು ಪ್ರತಿಭಾನ್ವಿತ ಹಾಗೂ ಯುವ ಆಟಗಾರರು ಸ್ಥಾನ ಕಳೆದುಕೊಂಡಿದ್ದಾರೆ.
ರೋಹಿತ್ ಶರ್ಮ ನಾಯಕರಾಗಿ ಮುಂದುವರಿದಿದ್ದು, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬುಮ್ರಾ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದ್ದರೆ, ಮೊಹಮದ್ ಶಮಿ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಸೇರಿದಂತೆ ಹಲವು ಆಟಗಾರರನ್ನು ಕಡೆಗಣಿಸಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಪನಾಯಕನಾಗಿದ್ದ ಜಸ್ ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರನ್ನು ಉಪನಾಯಕನಾಗಿ ಪರಿಗಣಿಸಲಾಗಿಲ್ಲ. ವಿಶೇಷ ಅಂದರೆ ಉಪನಾಯಕನನ್ನಾಗಿ ಯಾರನ್ನೂ ಆಯ್ಕೆ ಮಾಡದೇ ಇರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿ.ಕೀ.), ಧ್ರುವ್ ಜುರೆಲ್ (ವಿ.ಕೀ.), ರವೀಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮದ್ ಸಿರಾಜ್, ಆಕಾಶ್ ದೀಪ್, ಜಸ್ ಪ್ರೀತ್ ಬುಮ್ರಾ ಮತ್ತು ಯಶ್ ದಯಾಳ್.