ಲಕ್ನೋ: ನಾಯಕ ದೇವದತ್ ಪಡಿಕ್ಕಲ್ ದ್ವಿಶತಕ ಹಾಗೂ ರವಿಚಂದ್ರನ್ ಸ್ಮರಣ್ ಶತಕದ ಸಹಾಯದಿಂದ ಕರ್ನಾಟಕ ತಂಡ ಸಂಪೂರ್ಣ 2 ದಿನ ಬ್ಯಾಟ್ ಬೀಸಿ ರಣಜಿ ಟ್ರೋಫಿ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ.
ಲಕ್ನೋದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಸೋಮವಾರ 2 ವಿಕೆಟ್ ಗೆ 355 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 689 ರನ್ ಪೇರಿಸಿದೆ.
ನಿನ್ನೆ ಕೆಎಲ್ ರಾಹುಲ್ ಶತಕ ಬಾರಿಸಿ ಔಟಾಗಿದ್ದರು. ಇಂದು 148 ರನ್ ಗಳಿಂದ ಆಟ ಮುಂದುವರಿಸಿದ ದೇವದತ್ ಪಡಿಕ್ಕಲ್, 330 ಎಸೆತಗಳಲ್ಲಿ 29 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 232 ರನ್ ಬಾರಿಸಿ ಔಟಾದರು.
ನಿನ್ನೆ 37 ರನ್ ಗಳಿಸಿದ್ದ ಕರುಣ್ ನಾಯರ್ (60) ನಿರ್ಗಮಿಸಿದರು. ರವಿಚಂದ್ರನ್ ಸ್ಮರಣ್ 191 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 121 ರನ್ ಗಳಿಸಿ ಶತಕದ ಗೌರವಕ್ಕೆ ಪಾತ್ರರಾದರು. ಸ್ಮರಣ್ ಮತ್ತು 60 ರನ್ ಗಳಿಸಿದ ಕೃತಿಕ್ ಕೃಷ್ಣ 6ನೇ ವಿಕೆಟ್ ಗೆ 123 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 700ರ ಗಡಿ ಸಮೀಪ ತಂದು ನಿಲ್ಲಿಸಿದರು.
ಉತ್ತರಾಖಂಡ್ ಬೌಲರ್ ನೀರಸವಾಗಿದ್ದು, ಇದರ ಪೂರ್ಣ ಲಾಭ ಪಡೆದ ಕರ್ನಾಟಕ ಬ್ಯಾಟ್ಸ್ ಮನ್ ಗಳು ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಫೈನಲ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿತು.
ಕರ್ನಾಟಕ ಮೊದಲ ಇನಿಂಗ್ಸ್ 180 ಓವರ್ ಗಳಲ್ಲಿ 6 ವಿಕೆಟ್ ಗೆ 689 (ದೇವದತ್ ಪಡಿಕ್ಕಲ್ 232, ಸ್ಮರಣ್ 121, ಕರುಣ್ ನಾಯರ್ 60, ಕೃತಿಕ್ ಕೃಷ್ಣ 60, ಆದಿತ್ಯ 132/3).


