ಕ್ಯಾನ್ ಬರಾ: ಹೋಟೆಲ್ ಬುಕ್ಕಿಂಗ್ ಬಿಲ್ ಪಾವತಿಯಾಗದ ಕಾರಣ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಕೆಲವು ಗಂಟೆಗಳ ಕಾಲ ರಸ್ತೆಯಲ್ಲೇ ನಿಂತು ಮುಜುಗರಕ್ಕೆ ಒಳಗಾದ ಘಟನೆ ಆಸ್ಟ್ರೇಲಿಯಾದ ಕ್ಯಾನ್ ಬರಾದಲ್ಲಿ ನಡೆದಿದೆ.
ಹೋಬಾರ್ಟ್‌ನಲ್ಲಿ ನಡೆಯುತ್ತಿರುವ ಎಫ್‌ಐಎಚ್ ಪ್ರೊ ಲೀಗ್ ಕಾರ್ಯಕ್ರಮದ ಎರಡನೇ ಹಂತ ಪಂದ್ಯಗಳಿಗಾಗಿ ಕ್ಯಾನ್ ಬೆರಾಗೆ ಆಗಮಿಸಿದ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಕೆಲವು ಗಂಟೆಗಳ ಕಾಲ ರಸ್ತೆಯಲ್ಲೇ ನಿಂತಿದ್ದರು.
ಹಣದ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಹಾಕಿ ಫೆಡರೇಶನ್ ಹಣ ಪಾವತಿಸದ ಕಾರಣ ಹೋಟೆಲ್ ಮುಂಗಡ ಬುಕ್ಕಿಂಗ್ ರದ್ದಾಯಿತು. ಇದರಿಂದ ಹಾಕಿಪಟುಗಳು ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೇ ಕೆಲವು ಗಂಟೆಗಳ ಕಾಲ ರಸ್ತೆಯಲ್ಲೇ ನಿಲ್ಲಬೇಕಾಯಿತು.
ಹಾಕಿ ತಂಡದ ಆಟಗಾರರು ಮತ್ತು ಸಿಬ್ಬಂದಿ ಬೇರೋಂದು ಹೋಟೆಲ್ ನಲ್ಲಿ ತಂಗಲು ಅಲೆದಾಡಬೇಕಾಯಿತು. ಈ ವೇಳೆ ಪಾಕಿಸ್ತಾನ ಹಾಕಿ ಒಕ್ಕೂಟ ಆಟಗಾರರ ವಾಸ್ತವ್ಯಕ್ಕಾಗಿ 4 ಸ್ಟಾರ್ ಹೋಟೆಲ್ ಮುಂಗಡ ಬುಕ್ಕಿಂಗ್ ಮಾಡಿ ಸಮಸ್ಯೆ ಬಗೆಹರಿಸಿತು ಎಂದು ತಿಳಿದು ಬಂದಿದೆ.
ಕಳೆದ ವಾರ ಕ್ಯಾನ್‌ಬೆರಾದಲ್ಲಿ ಇದೇ ತಂಡ ಉಳಿದುಕೊಂಡಿದ್ದು, ಆಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಸಮಯದ ವ್ಯತ್ಯಾಸದಿಂದಾಗಿ ಪಿಎಸ್‌ಬಿ ಮತ್ತು ಪಿಎಚ್‌ಎಫ್ ಅಧಿಕಾರಿಗಳು ಮನೆಗೆ ಹಿಂದಿರುಗಿದ್ದರಿಂದ ಸಂಪರ್ಕಕ್ಕೆ ಸಿಗದ ಕಾರಣ ಗೊಂದಲ ಉಂಟಾಗಿ ಆಟಗಾರರು ಸಮಸ್ಯೆ ಎದುರಿಸಬೇಕಾಯಿತು ಎಂದು ತಂಡದ ಮುಖ್ಯ ತರಬೇತುದಾರ ತಾಹಿರ್ ಜಮಾನ್ ಘಟನೆಯನ್ನು ವಿವರಿಸಿದ್ದಾರೆ.
ಆಟಗಾರರು ಹಲವು ಗಂಟೆಗಳ ಕಾಲ ಹೊರಗೆ ಕಾಯುತ್ತಿದ್ದ ನಂತರ, ಹೋಟೆಲ್ ಆಡಳಿತ ಮಂಡಳಿಗೆ ಸ್ಥಳೀಯ ರ ನೆರವಿನಿಂದ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟ ನಂತರ ಕೆಲವು ಕೊಠಡಿಗಳನ್ನು ನೀಡಲಾಗಿತ್ತು. ಲಭಿಸಿದ 2-3 ಕೊಠಡಿಯಲ್ಲಿ ಆಟಗಾರರು ಹಾಗೂ ಸಿಬ್ಬಂದಿ ಒಂದು ದಿನ ಕಳೆಯಬೇಕಾಯಿತು ಎಂದು ತಿಳಿದು ಬಂದಿದೆ.


