ಆರಂಭಿಕ ಕೆಎಲ್ ರಾಹುಲ್, ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೂದಲೆಳೆ ಅಂತರದಿಂದ ಫಾಲೋ ಆನ್ ನಿಂದ ಪಾರಾಗಿದೆ.
ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಪಂದ್ಯ ಮಳೆಯ ಅಡ್ಡಿಯಿಂದ ತೀವ್ರ ಕುತೂಹಲ ಮೂಡಿಸಿತ್ತು. 4 ವಿಕೆಟ್ ಗೆ 51 ರನ್ ಗಳಿಂದ ಆಟ ಮುಂದುವರಿಸಿದ ಭಾರತ ತಂಡ ದಿನದಾಂತ್ಯಕ್ಕೆ ಮಂದ ಬೆಳಕಿನ ಕಾರಣ ಆಟ ನಿಂತಾಗ 9 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿದೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಸಿದ್ದು, ಫಾಲೋಆನ್ ನಿಂದ ತಪ್ಪಿಸಿಕೊಳ್ಳಬೇಕಾದರೆ ಭಾರತ 245 ರನ್ ಗಳಿಸಬೇಕಿತ್ತು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಹೋರಾಟದಿಂದ ಭಾರತ ಫಾಲೋಆನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ನಾಯಕ ರೋಹಿತ್ ಶರ್ಮ (10) ಬೇಗನೇ ನಿರ್ಗಮಿಸಿದರು. ನಂತರ 7ನೇ ವಿಕೆಟ್ ಗೆ ಜೊತೆಯಾದ ಕೆಎಲ್ ರಾಹುಲ್ ಮತ್ತು ಜಡೇಜಾ 66 ರನ್ ಜೊತೆಯಾಟ ನಿಭಾಯಿಸಿ ಹೋರಾಟ ನಡೆಸಿದರು.
139 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 84 ರನ್ ಗಳಿಸಿದ್ದ ಕೆಎಲ್ ರಾಹುಲ್, ಸ್ಪಿನ್ನರ್ ಲಿಯಾನ್ ಎಸೆತದಲ್ಲಿ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾಗಿ ಶತಕದಿಂದ ವಂಚಿತರಾದರು. ಜಡೇಜಾ 123 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 77 ರನ್ ಗಳಿಸಿ ಔಟಾದರು.
ಜಡೇಜಾ ಔಟಾಗುವ ಮುನ್ನ ನಿತೀಶ್ ಕುಮಾರ್ ರೆಡ್ಡಿ (16 ರನ್, 61 ಎಸೆತ, 1 ಬೌಂಡರಿ] ಜೊತೆ 8ನೇ ವಿಕೆಟ್ ಗೆ 53 ರನ್ ಜೊತೆಯಾಟದಿಂದ ತಂಡವನ್ನು 200ರ ಗಡಿ ಸಮೀಪ ತಂದು ನಿಲ್ಲಿಸಿದರು.
ಈ ಹಂತದಲ್ಲಿ ಭಾರತ 201 ರನ್ ಗೆ 9 ವಿಕೆಟ್ ಕಳೆದುಕೊಂಡು ಫಾಲೋಆನ್ ಭೀತಿಗೆ ಸಿಲುಕಿತ್ತು. ಆಗ ಪರ್ಯಾಯ ನಾಯಕ ಜಸ್ ಪ್ರೀತ್ ಬುಮ್ರಾ ಮತ್ತು ಆಕ್ಷ್ ದೀಪ್ ಮುರಿಯದ 10ನೇ ವಿಕೆಟ್ ಗೆ 39 ರನ್ ಪೇರಿಸಿ ತಂಡವನ್ನು ಫಾಲೋಆನ್ ನಿಂದ ಪಾರು ಮಾಡಿದರು.
ಬೌಲಿಂಗ್ ಮಿಂಚುತ್ತಿರುವ ಬುಮ್ರಾ 27 ಎಸೆತಗಳಲ್ಲಿ 1 ಸಿಕ್ಸರ್ ಸಹಾಯದಿಂದ 17 ರನ್ ಗಳಿಸಿ ಔಟಾಗದೇ ಉಳಿದರೆ, ಆಕ್ಷ್ ದೀಪ್ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 27 ರನ್ ಗಳಿಸಿದ್ದಾರೆ.