ಮಧ್ಯಮ ಕ್ರಮಾಂಕದಲ್ಲಿ ಕೃಷ್ಣನ್ ಶ್ರೀಜಿತ್ ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮಹತ್ವದ ಮುನ್ನಡೆ ಸಾಧಿಸಿದೆ.
ಲಕ್ನೋದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ 1 ವಿಕೆಟ್ ಗೆ 78 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 275 ರನ್ ಗಳಿಸಿ ಔಟಾಯಿತು. ಮೊದಲ ಇನಿಂಗ್ಸ್ ನಲ್ಲಿ 89 ರನ್ ಗೆ ಆಲೌಟಾಗಿದ್ದ ಉತ್ತರ ಪ್ರದೇಶ ಎರಡನೇ ಇನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದೆ. ಉತ್ತರ ಪ್ರದೇಶ ಮುನ್ನಡೆ ಪಡೆಯಬೇಕಾದರೆ ಇನ್ನೂ 108 ರನ್ ಗಳಿಸಬೇಕಾಗಿದೆ.
ಉತ್ತರ ಪ್ರದೇಶ ಆರಂಭಿಕ ಆಘಾತ ಅನುಭವಿಸಿದರೂ ಮಹದೇವ್ ಕೌಶಿಕ್ [33] ಮತ್ತು ನಾಯಕ ಆರ್ಯನ್ ಜುರೆಲ್ [35] ಎರಡನೇ ವಿಕೆಟ್ ಗೆ 70 ರನ್ ಜೊತೆಯಾಟದಿಂದ ತಂಡವನ್ನು ನಿಭಾಯಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ತಂಡ ಕೃಷ್ಣನ್ ಶ್ರೀಜಿತ್ ಶತಕದಿಂದ ಬೃಹತ್ ಮೊತ್ತ ಕಲೆ ಹಾಕಿತು. ಕೃಷ್ಣನ್ 153 ಎಸೆತಗಳಲ್ಲಿ 12 ಬೌಂಡರಿ ಒಳಗೊಂಡ 110 ರನ್ ಬಾರಿಸಿದರೆ, ಯಶೋವರ್ಧನ್ ಪ್ರತಾಪ್ 125 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 55 ರನ್ ಗಳಿಸಿದರು. ವಿದ್ಯಾಧರ್ ಪಾಟೀಲ್ 38 ರನ್ ಬಾರಿಸಿದರು.