ಲಕ್ನೋ ಸೂಪರ್ ಜೈಂಟ್ಸ್ ನಿಂದ ಕೆಎಲ್ ರಾಹುಲ್ ಬಿಡುಗಡೆಗೆ ಕಾಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತಂಡದಲ್ಲಿ ಉಳಿಸಿಕೊಂಡ 5 ಆಟಗಾರರ ಪಟ್ಟಿ ಅಂತಿಮಗೊಳಿಸಿದ್ದು, ಅಕ್ಟೋಬರ್ 31ರಂದು ಅಧಿಕೃತವಾಗಿ ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಲಿದೆ.
ಕೆಎಲ್ ರಾಹುಲ್ ಐಪಿಎಲ್ ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದ ಆರ್ ಸಿಬಿ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಕನ್ನಡಿಗ ರಾಹುಲ್ ಆರ್ ಸಿಬಿಗೆ ಮರಳಬೇಕು ಎಂಬುದು ತಂಡದ ಯೋಚನೆ ಮಾತ್ರವಲ್ಲ, ಸ್ವತಃ ರಾಹುಲ್ ಗೂ ಬೇಕಿದೆ. ಅಲ್ಲದೇ ಅಭಿಮಾನಿಗಳ ಆಸೆಯೂ ಇದಾಗಿದೆ.
ಅಕ್ಟೋಬರ್ 31ರಂದು ಆಟಗಾರರ ಪಟ್ಟಿ ಸಲ್ಲಿಸಲು ಕೊನೆಯ ದಿನವಾಗಿದೆ. ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ತಂಡವನ್ನು ಅಂತಿಮಗೊಳಿಸಿದ್ದರೂ ಪಟ್ಟಿ ಸಲ್ಲಿಸದ ಏಕೈಕ ಫ್ರಾಂಚೈಸಿ ಆರ್ ಸಿಬಿ ಆಗಿದೆ. ಇದರಿಂದ ಆರ್ ಸಿಬಿ ತಂಡದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಲೇ ಇದೆ.
ಆರ್ ಸಿಬಿ ತಂಡ ಕೆಎಲ್ ರಾಹುಲ್ ಜೊತೆ ಮಾತುಕತೆ ನಡೆಸಿದ್ದು ತಂಡಕ್ಕೆ ಕರೆತರುವ ಬಗ್ಗೆ ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ನಿವೃತ್ತಿಯಿಂದ ತೆರವಾಗಿರುವ ಜಾಗಕ್ಕೆ ರಾಹುಲ್ ಅವರನ್ನು ಕರೆತರಲಾಗುತ್ತಿದೆ.
ಈ ಬಗ್ಗೆ ಆರ್ ಸಿಬಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಎಲ್ಲವೂ ಮುಗಿದಿದೆ. ಆಟಗಾರರ ಆಯ್ಕೆ ಬಗ್ಗೆ ಕೋಚ್ ಸಿಬ್ಬಂದಿ ಸಾಕಷ್ಟು ಕಠಿಣ ಶ್ರಮ ವಹಿಸಿದೆ ಎಂದು ಹೇಳಿಕೊಂಡಿದೆ.
ತಂಡದಲ್ಲಿ ವಿರಾಟ್ ಕೊಹ್ಲಿ ಅವರನ್ನು ಮಾತ್ರ ಉಳಿಸಿಕೊಳ್ಳುವ ಬಗ್ಗೆ ದೃಢಪಡಿಸಿದ್ದ ಆರ್ ಸಿಬಿ ಇದೀಗ ತಂಡದಲ್ಲಿ ಉಳಿಯುವ ಸಂಭಾವ್ಯ 5 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿ (18 ಕೋಟಿ ರೂ.) ಮೊಹಮದ್ ಸಿರಾಜ್ (14 ಕೋಟಿ ರೂ.), ವಿಲ್ ಜಾಕ್ಸ್ (14 ಕೋಟಿ ರೂ.), ಯಶ್ ದಯಾಲ್ (ಮೂಲಧನ 4 ಕೋಟಿ ರೂ.).
ವಿದೇಶೀ ಆಟಗಾರರಾದ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್, ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಬಗ್ಗೆ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ. ಬಹುತೇಕ ಇಬ್ಬರೂ ಆಟಗಾರರನ್ನು ಕೈಬಿಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಬಂದರೆ ಅವರಿಗೆ ನಾಯಕ ಪಟ್ಟ ವಹಿಸಬೇಕೇ ಅಥವಾ ವಿಕೆಟ್ ಕೀಪರ್ ಆಗಿ ಉಳಿಸಿಕೊಳ್ಳಬೇಕೆ ಎಂಬ ಗೊಂದಲ ಇನ್ನೂ ಮುಂದುವರಿದಿದೆ. ಒಂದು ವೇಳೆ ನಾಯಕ ಪಟ್ಟ ವಹಿಸಲು ರಾಹುಲ್ ನಿರಾಕರಿಸಿದರೆ ಫಾಫ್ ಡು ಪ್ಲೆಸಿಸ್ ಅವರನ್ನು ರೈಟ್ ಟು ಮ್ಯಾಚ್ ಮೂಲಕ ಉಳಿಸಿಕೊಂಡು ನಾಯಕರಾಗಿ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
https://twitter.com/KLfied_/status/1851124248431186366