ಟೆನಿಸ್ ಗ್ರ್ಯಾನ್ ಸ್ಲಾಮ್ ಟೂರ್ನಿ ಮಾದರಿ ಜಾಗತಿಕ ಮಟ್ಟದಲ್ಲಿ ಟಿ-20 ಕ್ರಿಕೆಟ್ ಲೀಗ್ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಿರುವ ಸೌದಿ ಅರೆಬಿಯಾ ಇದಕ್ಕಾಗಿ 500 ದಶಲಕ್ಷ ಡಾಲರ್ (ಅಂದಾಜು 4347 ಕೋಟಿ ರೂ.) ಹೂಡಿಕೆ ಮಾಡಲು ಸಿದ್ಧವಾಗಿದೆ.
ವರ್ಷದಲ್ಲಿ ನಾಲ್ಕು ದೇಶಗಳಲ್ಲಿ ಟಿ-20 ಕ್ರಿಕೆಟ್ ಲೀಗ್ ನಡೆಸುವ ಬೃಹತ್ ಯೋಜನೆ ಇದಾಗಿದ್ದು, ಈ ರೀತಿಯ ಟೂರ್ನಿ ನಡೆಸುವ ಪ್ರಸ್ತಾಪವನ್ನು ಡ್ಯಾನಿ ಟೌನ್ ಸೆಂಡ್ ನೇತೃತ್ವದ ಸೌದಿ ಅರೆಬಿಯಾದ ಎಸ್ ಆರ್ ಜೆ ಸ್ಪೋರ್ಟ್ಸ್ ಇನ್ವೆಸ್ಟ್ ಮೆಂಟ್ ಬೆಂಬಲಿಸಿದ್ದು, ನೀಲನಕ್ಷೆ ಸಿದ್ಧವಾಗುತ್ತಿದೆ.
ಆಸ್ಟ್ರೇಲಿಯಾದ ನೀಲ್ ಮ್ಯಾಕ್ಸ್ ವೆಲ್, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಸೇರಿದಂತೆ ಹಲವರು ರಹಸ್ಯವಾಗಿ ಟೂರ್ನಿಯ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.
ಕ್ರಿಕೆಟ್ ಆಟದ ಜೊತೆ ಮಾಡಲಿಂಗ್ ಸೇರಿದಂತೆ ವಿವಿಧ ರೀತಿಯಲ್ಲಿ ಆಟಗಾರರು ಹಣ ಸಂಪಾದಿಸುವ ಅವಕಾಶವನ್ನು ಲೀಗ್ ರೂಪಿಸಲಿದೆ. ಐಸಿಸಿ ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಅಡ್ಡಿಯಾಗದಂತೆ ವೇಳಾಪಟ್ಟಿ ಸಿದ್ಧಪಡಿಸುವ ಯೋಜನೆ ಹೊಂದಿದೆ. ಇದರಿಂದ ಐಪಿಎಲ್, ಬಿಗ್ ಬಾಷ್ ಅಂತಹ ಟೂರ್ನಿಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿಕೊಂಡಿದೆ.


