ಒಂದಲ್ಲ, ಎರಡು ಬಾರಿ ಸೂಪರ್ ಓವರ್ ಕಂಡ ಅಪರೂಪದ ಟಿ-20 ವಿಶ್ವಕಪ್ ನ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ.
ಗುಜರಾತ್ ಅಹಮದಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಪೇರಿಸಿದರೆ, ಆಫ್ಘಾನಿಸ್ತಾನ 19.4 ಓವರ್ ಗಳಲ್ಲಿ 187 ರನ್ ಗೆ ಆಲೌಟಾಯಿತು.
ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಮೊದಲ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 17 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ಸ್ಟಬ್ಸ್ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸರ್ ನೆರವಿನಿಂದ 1 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿತು. ಇದರಿಂದ ಮೊದಲ ಸೂಪರ್ ಓವರ್ ಟೈನಲ್ಲಿ ಅಂತ್ಯಗೊಂಡಿತು.
ಎರಡನೇ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 23 ರನ್ ಕಲೆ ಹಾಕಿದರೆ, ಆಫ್ಘಾನಿಸ್ತಾನ 18 ರನ್ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲುಂಡಿತು.
ಈ ಸೋಲಿನೊಂದಿಗೆ ಆಫ್ಘಾನಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು. ಆಫ್ಘಾನಿಸ್ತಾನ ಮುಂದಿನ ಹಂತಕ್ಕೆ ಹೋಗಬೇಕಾದರೆ ಎದುರಾಳಿ ತಂಡಗಳ ವಿರುದ್ಧ ಭಾರೀ ಅಂತರದಿಂದ ಮುಂದಿನ ಪಂದ್ಯಗಳಲ್ಲಿ ಗೆಲ್ಲಬೇಕು ಹಾಗೂ ಗುಂಪಿನ ಇತರೆ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಭವಿಷ್ಯವನ್ನು ಅವಲಂಬಿಸಬೇಕಾಗಿದೆ.


