ಆಲ್ ರೌಂಡರ್ ಟಿಮ್ ಡೇವಿಡ್ ಸಿಡಿಸಿದ ಚೊಚ್ಚಲ ಅರ್ಧಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 96 ರನ್ ಗುರಿ ಒಡ್ಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ಮಳೆಯಿಂದಾಗಿ 14 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಹೊಡಿಬಡಿ ಆಟಕ್ಕೆ ಮುಂದಾಗಿ 9 ವಿಕೆಟ್ ಗೆ 95 ರನ್ ಕಲೆಹಾಕಿತು.
ತವರಿನ ಪಿಚ್ ಅರಿಯಲು ವಿಫಲರಾಗಿರುವ ಆರ್ ಸಿಬಿ ಆಟಗಾರರು ಮತ್ತೊಮ್ಮೆ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿದರೆ, 111 ರನ್ ಅಲ್ಪ ಮೊತ್ತ ದಾಖಲಿಸಿಯೂ ಗೆದ್ದ ದಾಖಲೆ ಬರೆದ ಪಂಜಾಬ್ ಬೌಲರ್ ಗಳು ಮಾರಕ ದಾಳಿ ನಡೆಸಿದರೆ, ಚುರುಕಿನ ಕ್ಷೇತ್ರರಕ್ಷಣೆಯಿಂದ ಆರ್ ಸಿಬಿಯನ್ನು ಕಟ್ಟಿ ಹಾಕಿದರು.
ಒಂದು ಹಂತದಲ್ಲಿ ಆರ್ ಸಿಬಿ 33 ರನ್ ಗೆ 5 ವಿಕೆಟ್ ಕಳೆದುಕೊಂಡರೆ ನಂತರ 63 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗಮನ ಸೆಳೆದ ಸಾಲ್ಟ್ (4), ವಿರಾಟ್ ಕೊಹ್ಲಿ (1), ಲಿಯಾಮ್ ಲಿವಿಂಗ್ ಸ್ಟನ್ (4), ಜಿತೇಶ್ ಕುಮಾರ್ (2), ಕೃನಾಲ್ ಪಾಂಡ್ಯ (1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಾಯಕ ರಜತ್ ಪಟಿದಾರ್ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 23 ರನ್ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿ ವಿಫಲರಾದರು.
ಕೊನೆಯ ಓವರ್ ನಲ್ಲಿ ಟಿಮ್ ಡೇವಿಡ್ ಸತತ 3 ಸಿಕ್ಸರ್ ಸಿಡಿಸಿದರು. ಅದೃಷ್ಟಕ್ಕೆ ಕೊನೆಯ ಎಸೆತ ನೋಬಾಲ್ ಆಗಿದ್ದರಿಂದ ಹೆಚ್ಚುವರಿಯಾಗಿ ಸಿಕ್ಕಿದ ಒಂದು ಎಸೆತದಲ್ಲಿ 2 ರನ್ ಬಾರಿಸಿದ ಟಿಮ್ ಡೇವಿಡ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿ ಅರ್ಧಶತಕ ಪೂರೈಸಿದರು. ಇದು ಟಿಮ್ ಡೇವಿಡ್ ಪಾಲಿಗೆ ಮೊದಲ ಐಪಿಎಲ್ ಅರ್ಧಶತಕವಾಗಿದೆ.
ಪಂಜಾಬ್ ಪರ ಅರ್ಷದೀಪ್ ಸಿಂಗ್ ಮಾರ್ಕೊ ಜೆನ್ಸನ್, ಯಜುರ್ವೆಂದ್ರ ಚಾಹಲ್, ಹರ್ಷದೀಪ್ ಬ್ರಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು.


