ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ನಲ್ಲಿ ಮುಖಾಮುಖಿ ಆಗಲಿವೆ.
ದುಬೈನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ನಲ್ಲಿ ಭಾರತ ತಂಡ 8 ವಿಕೆಟ್ ಗಳ ಭಾರೀ ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿದರೆ, ಮತ್ತೊಂದು ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್ ಗಳಿಂದ ಪಾಕಿಸ್ತಾನ ಮಣಿಸಿದೆ.
ಹವಾಮಾನ ವೈಪರಿತ್ಯದಿಂದಾಗಿ ಏಕದಿನ ಪಂದ್ಯವನ್ನು 20 ಓವರ್ ಗಳಿಗೆ ಕಡಿತ ಮಾಡಲಾಯಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು 8 ವಿಕೆಟ್ ಗೆ 138 ರನ್ ಗಳಿಗೆ ನಿಯಂತ್ರಿಸಿದ ಭಾರತ ತಂಡ 2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಭಾರತ ತಂಡದ ಪರ ವೈಭವ್ ಸೂರ್ಯವಂಶಿ (9) ಹಾಗೂ ನಾಯಕ ಆಯುಷ್ ಮಾತ್ರೆ (7) ವಿಫಲರಾಗಿ ನಿರಾಸೆ ಮೂಡಿಸಿದರೆ, ಏರಾನ್ ಜಾರ್ಜ್ (ಅಜೇಯ 58 ರನ್) ಮತ್ತು ವಿಹಾನ್ ಮಲ್ಹೋತ್ರಾ (ಅಜೇಯ 62) ಮುರಿಯದ ಮೂರನೇ ವಿಕೆಟ್ ಗೆ 114 ರನ್ ಜೊತೆಯಾಟದಿಂದ ಸುಲಭ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ಪರ ಚಮಿಕಾ ಹಿನತಿಂಗಳ (42), ನಾಯಕ ವಿಮಂತ್ ಧಿನಸಾರ (32) ಮತ್ತು ಸೆಥಮಿಕ ಸೇನವೀರರತ್ನೆ (30) ತಂಡದ ಪರ ಹೋರಾಟ ನಡೆಸಿದರೆ, ಸಂಘಟಿತ ದಾಳಿ ನಡೆಸಿದ ಭಾರತದ ಪರ ಹೆನಿಲ್ ಪಟೇಲ್ ಮತ್ತು ಕನಿಷ್ಕ್ ಚೌಹಾಣ್ ತಲಾ 2 ವಿಕೆಟ್ ಪಡೆದರು.


