14 ವರ್ಷದ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅಖಾಡಕ್ಕೆ ಇಳಿಯುವ ಮೂಲಕ ಐಪಿಎಲ್ ಗೆ ಪಾದರ್ಪಣೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಶನಿವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗಮನ ಸೆಳೆದರು.
ವೈಭವ್ ಸೂರ್ಯವಂಶಿ ಐಪಿಎಲ್ ಗೆ ಪಾದರ್ಪಣೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದು, ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದ ಆಟಗಾರನಿಗಿಂತ 2 ವರ್ಷ ಮುಂಚಿತವಾಗಿ ಐಪಿಎಲ್ ನಲ್ಲಿ ಆಡಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಬೆಂಗಾಲ್ ನ ಪ್ರಯಾಸ್ ರೇ ಬರ್ಮನ್ 16 ವರ್ಷ 157 ದಿನಗಳಾಗಿದ್ದಾಗ ಆರ್ ಸಿಬಿ ಪರ 1.5 ಕೋಟಿಗೆ ಐಪಿಎಲ್ ಗೆ ಪಾದರ್ಪಣೆ ಮಾಡಿ ಅತೀ ಕಿರಿಯ ಆಟಗಾರ ಎನಿಸಿಕೊಂಡರು. ಮುಜೀಬ್ ಉರ್ ರೆಹಮಾನ್ (17 ವರ್ಷ 11 ದಿನ) ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರೆ, ರಿಯಾನ್ ಪರಾಗ್ 17 ವರ್ಷ 152 ದಿನ 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಮೂರನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು.
13ನೇ ವಯಸ್ಸಿಗೆ ವೈಭವ್ ಅಂಡರ್ 19 ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 58 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ಈತನ ಸಾಧನೆ ಗುರುತಿಸಿ ರಾಜಸ್ಥಾನ್ ರಾಯಲ್ಸ್ 1.1 ಕೋಟಿ ರೂ. ನೀಡಿ ಹರಾಜಿನಲ್ಲಿ ಖರೀದಿಸಿತ್ತು.
ಬಿಹಾರ ಮೂಲದ ಬಾಲಕ ವೈಭವ್ ಸೂರ್ಯವಂಶಿ ರಣಜಿಯಲ್ಲಿ ತೋರಿದ ಪ್ರದರ್ಶನ ಆಧರಿಸಿ ರಾಜಸ್ಥಾನ್ ರಾಯಲ್ಸ್ ತಂಡ ಸೆಳೆದುಕೊಂಡಿದ್ದರೂ ಇದುವರೆಗೆ ಆಡಲು ಅವಕಾಶ ನೀಡಿರಲಿಲ್ಲ. ಕಳೆದ ಪಂದ್ಯದಲ್ಲಿ ಗಾಯಗೊಂಡ ನಾಯಕ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಆರಂಭಿಕನಾಗಿ ಕಣಕ್ಕಿಳಿದರು.
ವೈಭವ್ ಸೂರ್ಯವಂಶಿ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 34 ರನ್ ಸಿಡಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ ಯಶಸ್ವಿ ಜೈಸ್ವಾಲ್ ಜತೆ 85 ರನ್ ಜೊತೆಯಾಟದಿಂದ ಗಮನ ಸೆಳೆದರು. ಆದರೆ ಮರ್ಕರಂ ಸ್ಪಿನ್ ಎಸೆತದಲ್ಲಿ ಸ್ಟಂಪ್ ಆಗಿ ನಿರಾಸೆಯೊಂದಿಗೆ ಮರಳಿದರು.


