ವಡೋದರಾ: ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಶನಿವಾರ ಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆತಿಥೇಯ ಬರೋಡಾ ತಂಡವನ್ನು 5 ರನ್ ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿ ಕರ್ನಾಟಕವು ಆರಂಭಿಕ ದೇವದತ್ ಪಡಿಕ್ಕಲ್ ಅವರ ಸೊಗಸಾದ ಶತಕದ ನೆರವಿನಿಂದ ೫ ವಿಕೆಟ್ ನಷ್ಟಕ್ಕೆ 281 ರನ್ ಕಲೆ ಹಾಕಿತು. ಉತ್ತರವಾಗಿ ಬರೋಡಾ 276 ರನ್‌ಗಳಿಗೆ ಆಲೌಟಾಗಿ ನಿರ್ಗಮಿಸಿತು.
ಕರ್ನಾಟಕದ ಸವಾಲಿನ ಮೊತ್ತಕ್ಕೆ ಬರೋಡಾ ಉತ್ತರವು ಆರಂಭದಲ್ಲಿ ಉತ್ತಮವಾಗಿತ್ತು. ಆರಂಭಿಕ ಶಾಶ್ವತ್ ಅವರ 104 ರನ್‌ಗಳ ನೆರವಿನಿಂದ ಬರೋಡಾ ಜಯದ ಸನಿಹ ಬಂತು.
ಬರೋಡಾ ತಂಡಕ್ಕೆ ಕೊನೆಯ ಐದು ಓವರ್‌ಗಳಲ್ಲಿ ಗೆಲ್ಲಲು ಕೇವಲ 44 ರನ್‌ಗಳ ಅವಶ್ಯಕತೆಯಿತ್ತು. ಆದರೆ, ಪ್ರಸಿದ್ಧ್ ಕೃಷ್ಣ (60ಕ್ಕೆ 2) 47ನೇ ಓವರಲ್ಲಿ ಪಂದ್ಯವನ್ನು ತಿರುಗಿಸಿದರು.
ಅಪಾಯಕಾರಿ ರಾವತ್ ಅವರನ್ನು ಕಡಿಮೆ ಅಳತೆಯ ಚೆಂಡಿನಿಂದ ಔಟ್ ಮಾಡಿದರು. ಬಳಿಕ ಅದೇ ಓವರಿನ ಐದನೇ ಎಸೆತದಲ್ಲಿ ಮಹೇಶ್ ಪಿಥಿಯಾ ಅವರನ್ನು ಔಟ್ ಮಾಡಿ ಬರೋಡಾದ ಭರವಸೆಯನ್ನು ಮತ್ತಷ್ಟು ಭಗ್ನಗೊಳಿಸಿದರು.
ಅಂತಿಮ ಓವರಲ್ಲಿ ಬರೋಡಾ ಗೆಲುವಿಗೆ 12 ರನ್‌ಗಳ ಅವಶ್ಯಕತೆಯಿತ್ತು. ಆದರೆ ರಾಜ್ ಲಿಂಬಾನಿ ಮತ್ತು ಭಾರ್ಗವ್ ಭಟ್ ಜೋಡಿ ಅಪಾಯಕಾರಿ ರನ್ ಕದಿಯುವ ಯತ್ನದಲ್ಲಿ ಅನಗತ್ಯ ವಿಕೆಟ್ ನೀಡಿತು.
ದೇವದತ್ ಸೊಗಸಾದ ಶತಕ
ಇದಕ್ಕೆ ಮುನ್ನ ಎಡಗೈ ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ಗಳಿಸಿದ ಅಮೋಘ ಶತಕದ (102) ಬೆಂಬಲದೊಂದಿಗೆ ಕರ್ನಾಟಕ ತಂಡವು ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಟಾಸ್ ಗೆದ್ದ ಬರೋಡಾ ನಾಯಕ ಕೃಣಾಲ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಮಯಂಕ್ ಅಗರವಾಲ್ ಕೇವಲ 6 ರನ್ ಗಳಿಸಿ ಔಟ್ ಆದರು.
ಬಳಿಕ ಅನೀಶ್ ಜೊತೆ ಸೇರಿದ ಪಡಿಕ್ಕಲ್ ದ್ವಿತೀಯ ವಿಕೆಟ್‌ಗೆ ಶತಕದ (133) ಜೊತೆಯಾಟ ಕಟ್ಟಿದರು. ಅನೀಶ್ 64 ಎಸೆತಗಳಲ್ಲಿ 52 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು.
ಮಧ್ಯಮ ಕ್ರಮಾಂಕದಲ್ಲಿ ಎಸ್. ರವಿಚಂದ್ರನ್ (28), ಕೃಷ್ಣನ್ ಶ್ರೀಜಿತ್ (28) ಹಾಗೂ ಅಭಿನವ್ ಮನೋಹರ್ (21) ಉಪಯುಕ್ತ ಇನಿಂಗ್ಸ್ ಕಟ್ಟಿದರು. ಹಾರ್ದಿಕ್ ರಾಜ್ ಶೂನ್ಯಕ್ಕೆ ಔಟ್ ಆದರು.
ವಿಕೆಟ್ನ ಇನ್ನೊಂದು ತುದಿಯಿಂದ ನೆಲಕಚ್ಚಿ ಆಡಿದ ದೇವದತ್ತ ಪಡಿಕ್ಕಲ್ ಅಮೋಘ ಶತಕ ಸಾಧನೆ ಮಾಡಿದರು. ಪಡಿಕ್ಕಲ್ 99 ಎಸೆತಗಳಲ್ಲಿ 102 ರನ್ (15 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್, ರಾಜ್ ಲಿಂಬಾನಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಂದೆಡೆ ಪಡಿಕ್ಕಲ್ಗೆ ಉತ್ತಮ ಸಾಥ್ ನೀಡಿದ ಅನೀಶ್ 64 ಎಸೆತಗಳಲ್ಲಿ 54 ರನ್ ಬಾರಿಸಿದರು.
ಇನ್ನುಳಿದಂತೆ ಶ್ರೇಯಾಸ್ ಗೋಪಾಲ್ 16 ಹಾಗೂ ಪ್ರಸಿದ್ಧ ಕೃಷ್ಣ ಅಜೇಯ 12 ರನ್ ಗಳಿಸಿದರು. ಬರೋಡಾ ಪರ ರಾಜ್ ಲಿಂಬಾನಿ ಹಾಗೂ ಎ. ಸೇತ್ ತಲಾ ಮೂರು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್ ಗಳಲ್ಲಿ 8 ವಿಕೆಟ್ ಗೆ 281 (ದೇವದತ್ ಪಡಿಕ್ಕಲ್ 102, ಕೆವಿ ಅನೀಶ್ 52; ಕೆವಿ ಅತಿತ್ ಶೇಠ್ 41ಕ್ಕೆ3, ರಾಜ್ ಲಿಂಬಾನಿ 47ಕ್ಕೆ 3). ಬರೋಡಾ: 49.5 ಓವರ್ ಗಳಲ್ಲಿ 276 (ಶಾಶ್ವತ್ ರಾವತ್ 104, ಅತಿತ್ ಸೇಠ್ 56; ಕೆಎಲ್ ವಾಸುಕಿ ಕೌಶಿಕ್ 39ಕ್ಕೆ 2, ಪ್ರಸಿದ್ಧ್ ಕೃಷ್ಣ 60ಕ್ಕೆ 2).